ಬೆಂಗಳೂರು: ಬಿಬಿಎಂಪಿ ದಾಸಪ್ಪ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಲಸಿಕಾ ವಿತರಣೆಯನ್ನು ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ 180 ಕೇಂದ್ರಗಳಲ್ಲಿ 15,000 ಆರೋಗ್ಯ ಕಾರ್ಯಕರ್ತರಿಗೆ ಇಂದು ಲಸಿಕೆ ನೀಡಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ 180 ಕಡೆ ಲಸಿಕೆ ನೀಡಲಾಗುತ್ತಿದ್ದು, ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆ ಕಂಡುಬಂದಿಲ್ಲ. ನಿನ್ನೆ 4 ಕಡೆ 3,569 ಮಂದಿಗೆ ಲಸಿಕೆ ನೀಡಲಾಗಿದ್ದು, ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಿಲ್ಲ. ಎಲ್ಲಾ ಕಡೆಯೂ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿರುವವರು ಸಂಭ್ರಮದಿಂದ ಲಸಿಕೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡಿಕೊಂಡು ಹೋಗಲಾಗುವುದು ಎಂದರು.
ಲಸಿಕೆ ಪಡೆಯುವವರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ಬಗ್ಗೆ ಫಲಾನುಭವಿಗಳಿಗೆ ಸಂದೇಶ ಹಾಗೂ ಕರೆ ಮಾಡಿ ತಿಳಿಸಲಾಗುತ್ತದೆ. ಲಸಿಕೆ ಪಡೆಯಲೇಬೇಕೆಂದು ಯಾರಿಗೂ ಬಲವಂತ ಮಾಡುವುದಿಲ್ಲ. ಲಸಿಕೆ ಪಡೆಯುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಕಾರಣಾಂತರಗಳಿಂದ ಫಲಾನುಭವಿಗಳು ಲಸಿಕೆ ಪಡೆಯಲು ಸಾಧ್ಯವಾಗಿರುವುದಿಲ್ಲ. ನಿನ್ನೆ ಭಾನುವಾರ ಆದ ಪರಿಣಾಮ ಕೆಲವರು ಬೇರೆಡೆ ಹೋಗಿರುವ ಕಾರಣ ಲಸಿಕೆ ಪಡೆದಿಲ್ಲ. ಲಸಿಕೆ ಪಡೆಯಲು ಬರದೇ ಇರುವವರಿಗೆ ಮತ್ತೊಂದು ದಿನ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.