ಬೆಂಗಳೂರು : ಕೊರೊನಾ ಸೋಂಕಿತ ವ್ಯಕ್ತಿಯೋರ್ವರು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಚಿಕಿತ್ಸೆ ನೀಡಿ ಎಂದು ನಾಲ್ಕು ದಿನದ ಹಿಂದೆ ಮನವಿ ಮಾಡಿದ್ರೂ ಸಹ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು, ಇದೀಗ ಕೊರೊನಾದಿಂದ ತಾಯಿ ಮೃತಪಟ್ಟ ಬಳಿಕ ಆಕೆಯ ಮಗ ಸೊಸೆಯನ್ನು ಕ್ವಾರಂಟೈನ್ ಮಾಡಿದ್ದಾರೆ.
ವಿವಿಪುರಂನ ಕಾರ್ತಿಕ್ ಹಾಗೂ ಆತನ ಪತ್ನಿ ಮತ್ತು ಆತನ ತಾಯಿ ಕೊರೊನಾ ಸೋಂಕಿತರಾಗಿದ್ದಾರೆ. ಕಳೆದ ಮಂಗಳವಾರದಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡುತಲಿದ್ದು, ಕೊರೊನಾದಿಂದ ನಾವು ಬಳಲುತ್ತಿದ್ದೇವೆ, ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ, ದಯಮಾಡಿ ನಮಗೆ ಚಿಕಿತ್ಸೆ ನೀಡಿ ಎಂದು ಅಂಗಲಾಚಿದ್ದರು. ಆದರೆ, ಬಿಬಿಎಂಪಿ ಮಾತ್ರ ಸದ್ಯಕ್ಕೆ ಬೆಡ್ ಖಾಲಿ ಇಲ್ಲ, ಆ್ಯಂಬುಲೆನ್ಸ್ ಇಲ್ಲ ಎಂಬ ಸಬೂಬು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಕಾರ್ತಿಕ್ ಕುಟುಂಬದವರು ಕೊರೊನಾ ರೋಗದಿಂದ ತತ್ತರಿಸಿದ್ದಾರೆ. ನಿನ್ನೆ ರಾತ್ರಿ ಅವರ ತಾಯಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾದ ಪರಿಣಾಮ ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಇತ್ತ ಕಾರ್ತಿಕ್ ಹಾಗೂ ಆತನ ಪತ್ನಿಯನ್ನು ಕ್ವಾರಂಟೈನ್ ಮಾಡಲಾಗಿದೆ. ನಮ್ಮ ತಾಯಿಗೆ ಎಲ್ಲರೂ ಇದ್ದರೂ ಸಹ, ಏನೂ ಇಲ್ಲದಂತೆ ಬಿಬಿಎಂಪಿ ಸಿಬ್ಬಂದಿ ಅಂತ್ಯಸಂಸ್ಕಾರ ಮಾಡುವ ಸ್ಥಿತಿ ಬಂತು ಎಂದು ಕೊರಗುತ್ತಿದ್ದಾರೆ.