ಬೆಂಗಳೂರು: ವಿಶ್ವ ಪ್ರಾಣಿಜನ್ಯ ರೋಗ ತಡೆ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ರೇಬಿಸ್ ಚುಚ್ಚುಮದ್ದು ನೀಡಲು ಮೀಸಲಿಟ್ಟಿರುವ 8 ವಾಹನಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಬಿಸ್ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತೀ ವರ್ಷ ಚುಚ್ಚುಮದ್ದು ನೀಡಲಾಗುತ್ತಿದೆ. ನಗರದಲ್ಲಿ ಮೂರು ಲಕ್ಷ ಬೀದಿನಾಯಿಗಳಿವೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ 44 ವಾರ್ಡ್ಗಳಲ್ಲಿ 41,934 ಲಸಿಕೆ ಹಾಕಲಾಗಿದೆ. ಶೇ. 70 ರಷ್ಟು ಈ ಗುರಿ ತಲುಪಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಕೇವಲ 47,164 ಬೀದಿನಾಯಿಗಳಿಗೆ ಮಾತ್ರ ಲಸಿಕೆ ಹಾಕಲಾಗಿತ್ತು ಎಂದು ಅಂಕಿಅಂಶಗಳ ಸಹಿತ ಆಯುಕ್ತರು ಮಾಹಿತಿ ನೀಡಿದರು.
2030 ರೊಳಗೆ ವಿಶ್ವದಲ್ಲೇ ರೇಬಿಸ್ ಖಾಯಿಲೆಯನ್ನು ನಿರ್ಮೂಲನೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಪ್ರಾಣಿಜನ್ಯ ಆರೋಗ್ಯ ಸಂಸ್ಥೆ ಗುರಿ ಹೊಂದಿವೆ. ನಗರದಲ್ಲಿ ಪ್ರತಿದಿನ ಕನಿಷ್ಠ 800 ಬೀದಿನಾಯಿಗಳಿಗೆ ಲಸಿಕೆ ಹಾಕುವ ಯೋಜನೆಯನ್ನು ಸಹ ಹೊಂದಲಾಗಿದೆ ಎಂದರು.
ಎಬಿಸಿ (ಸಂತಾನ ಹರಣ ಶಸ್ತ್ರಚಿಕಿತ್ಸೆ) ಹಾಗೂ ರೇಬಿಸ್ ಸೇವಾದಾರರಿಗೆ ಒಂದು ವಾಹನ ಹೊರಗುತ್ತಿಗೆ ಪಡೆದು ವಾಹನ ಚಾಲಕರು ಹಾಗೂ ಇಬ್ಬರು ನಾಯಿಹಿಡಿಯುವವರನ್ನು ನೇಮಿಸಿಕೊಂಡು ವಾರ್ಡ್ವಾರು ವಾರ್ಷಿಕವಾಗಿ ವಲಯದ ವ್ಯಾಪ್ತಿಯಲ್ಲಿನ ಬೀದಿನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕಬೇಕಾಗಿರುತ್ತದೆ. ಹೀಗಾಗಿ ಪಾಲಿಕೆಯಿಂದಲೇ ಎಂಟು ವಾಹನಗಳನ್ನು ನೀಡಲಾಗಿದೆ. ಬೀದಿನಾಯಿಗಳಿಗೆ ಲಸಿಕೆ ಹಾಕುವ ಸಂಖ್ಯೆಯನ್ನು ಹೆಚ್ಚಿಸುವುದು ಪಾಲಿಕೆಯ ಗುರಿಯಾಗಿದೆ ಎಂದರು.