ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿ ಅನಾಹುತ ಸಂಬಂಧ ದೂರದಾರರಿಗೆ ಅಂದರೆ, ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ಹಲಸೂರು ಗೇಟ್ ಠಾಣಾ ಪೊಲೀಸರು ನೊಟೀಸ್ ನೀಡಿದ್ದಾರೆ. ಈ ಕುರಿತು ಮುಖ್ಯ ಎಂಜಿನಿಯರ್ ತೀವ್ರ ಅಸಮಾಧಾನ ಹೊರಹಾಕಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಹೇಳಿದ್ದಾರೆ.
ನಗರದಲ್ಲಿ ಇಂದು (ಸೋಮವಾರ) ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಘಟನೆ ಸಂಬಂಧ ನಾನೇ ಠಾಣೆಗೆ ದೂರು ನೀಡಿದ್ದೇನೆ. ಹೀಗಿರುವಾಗ ನನಗೆ ನೊಟೀಸ್ ನೀಡಿರುವುದು ಅಚ್ಚರಿ ತಂದಿದೆ. ಪೊಲೀಸರ ವರ್ತನೆ ಬಗ್ಗೆ ಪಾಲಿಕೆ ಮೇಲಾಧಿಕಾರಿಗಳ ಜೊತೆಗೆ ಮಾತನಾಡಿ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ'' ಎಂದರು.
"ನೊಟೀಸ್ ನನಗೆ ತಲುಪಿಲ್ಲ. ನನ್ನ ಕಚೇರಿಗೂ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಮಾಹಿತಿ ಇದೆ. ನೊಟೀಸ್ ವಿಚಾರವನ್ನು ಸಾರ್ವಜನಿಕಗೊಳಿಸಲಾಗಿದೆ. ಇದು ಹೇಗೆ ಸಾಧ್ಯ ಎಂದೆಲ್ಲ ಕಾನೂನು ತಜ್ಞರ ಬಳಿ ಚರ್ಚಿಸಲಾಗುವುದು'' ಎಂದು ತಿಳಿಸಿದರು.
''ಪೊಲೀಸರು ಘಟನೆ ನಡೆದ ಕಟ್ಟಡಕ್ಕೆ ಬೀಗ ಹಾಕಿದ್ದಾರೆ. ಇಂದು ಸಂಜೆಯ ನಂತರ ಬೀಗ ನೀಡುತ್ತಾರೆ. ಆ ಬಳಿಕ ಕಚೇರಿ ತೆರೆದು ಪರಿಶೀಲನೆ ಮಾಡಲಾಗುವುದು. ವಿಕ್ಟೋರಿಯಾ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಖಾಸಗಿ ಆಸ್ಫತ್ರೆಗೆ ಸೇರಿಸಲು ವೈದ್ಯರ ವರದಿ ಬಂದ ಬಳಿಕ ತೀರ್ಮಾನ ಮಾಡುತ್ತೇವೆ'' ಎಂದು ಪ್ರಹ್ಲಾದ್ ಮಾಹಿತಿ ನೀಡಿದರು.
ಪೊಲೀಸರು ಕಳುಹಿಸಿದ ನೊಟೀಸ್ ವಿವರ: ಗುಣನಿಯಂತ್ರಣ ಘಟಕದಲ್ಲಿ ಏನೆಲ್ಲ ಪರೀಕ್ಷೆ ನಡೆಸಲಾಗುತ್ತಿದೆ?, ಮುನ್ನೆಚ್ಚರಿಕಾ ಕ್ರಮಗಳು ಏನೆಲ್ಲಾ ಇರಬೇಕಿತ್ತು ಹಾಗೂ ಈಗ ಏನಿವೆ? ಯಾವ ಹಂತದ ಅಧಿಕಾರಿಗಳು ಗುಣಮಟ್ಟ ಪರೀಕ್ಷೆ ನಡೆಸುತ್ತಾರೆ? ಅವರ ವಿದ್ಯಾರ್ಹತೆ ಏನು? ತಂತ್ರಜ್ಞರೇ? ರಾಸಾಯನಿಕ ತಜ್ಞರೇ? ಯಾವೆಲ್ಲ ವಸ್ತುಗಳು ಅಥವಾ ಕಾಮಗಾರಿಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂಬ ಸಮಗ್ರ ಮಾಹಿತಿ, ದಾಖಲೆಗಳನ್ನು ನೀಡುವಂತೆ ಪೊಲೀಸರು ನೊಟೀಸ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: BBMP fire: ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ.. ಹಿರಿಯ ಅಧಿಕಾರಿಗಳ ಹೇಳಿಕೆ ದಾಖಲಿಸಲು ಮುಂದಾದ ಪೊಲೀಸರು