ಬೆಂಗಳೂರು: 2008ರಲ್ಲಿ ಸ್ಥಗಿತಗೊಳಿಸಿದ್ದ ಎ ಖಾತಾ ವಿತರಣೆಯನ್ನು ಮತ್ತೊಮ್ಮೆ ಚಾಲನೆ ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ಈ ಕುರಿತು ನೀತಿ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಆಯುಕ್ತರು, ಎ ಖಾತಾ ವಿತರಣೆ ನಿಲ್ಲಸಿದ್ದರಿಂದ ಬ್ಯಾಂಕ್ ಸೌಲಭ್ಯ, ನಕ್ಷೆ ಮಂಜೂರಾತಿ , ವಾಸಯೋಗ್ಯ ಪ್ರಮಾಣಪತ್ರ ಸಿಗುತ್ತಿರಲಿಲ್ಲ. ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಇತ್ತು. ಈ ಅಕ್ರಮಗಳಿಗೆ ಬ್ರೇಕ್ ಹಾಕಿ, ಪಾಲಿಕೆ ಆದಾಯ ಹೆಚ್ಚಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಈ ಹಿಂದೆ ಬಿಬಿಎಂಪಿ ಖಾತಾ ವರ್ಗಾವಣೆ ಕುರಿತು ನಿರ್ಣಯ ತೆಗೆದುಕೊಂಡು, ವಿಸ್ತಾರವಾದ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಲಾಗಿತ್ತು. ಬಳಿಕ ನಗರಾಭಿವೃದ್ಧಿ ಇಲಾಖೆಯಿಂದ ಅಡ್ವೋಕೇಟ್ ಜನರಲ್ ಬಳಿ ಹೋಗಿತ್ತು. ಇದಕ್ಕೆ ಸಕರಾತ್ಮಕ ಒಪ್ಪಿಗೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆಯ ಆದಾಯ ಕ್ರೋಢೀಕರಿಸುವ ಅಧಿಕಾರ ಪಾಲಿಕೆಗೆಗಿದೆ. ಬಿಬಿಎಂಪಿಗೆ ಬರುವ ದುಡ್ಡು ಕೆಲ ಭ್ರಷ್ಟ ಅಧಿಕಾರಿಗಳ ಜೇಬಿಗೆ ಹೋಗುತ್ತಿದೆ. ಇದನ್ನು ಕಾನೂನುಬದ್ಧಗೊಳಿಸಬೇಕು. ಬಿ ಖಾತೆಗಳಿಗೆ ಎ ಖಾತಾ ನೀಡಬೇಕೆಂದು ಮಾಜಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಹೇಳಿದರು. ಈ ವೇಳೆ ಕೆಲ ವಿಪಕ್ಷ ನಾಯಕರು, ಗುಣಶೇಖರ್ ಮಾತಿಗೆ ಧ್ವನಿಗೂಡಿಸಿದರು.
ಈ ವೇಳೆ ಉತ್ತರಿಸಿದ ಆಯುಕ್ತರು ಖಾತಾ ವರ್ಗಾವಣೆ ಕುರಿತ ನೀತಿ ನಿಯಮಗಳ ರಚನೆ ಅಂತಿಮ ಹಂತದಲ್ಲಿದೆ. ಒಂದು ವಾರದಲ್ಲಿ ಜಾರಿಗೆ ಬರಲಿದೆ ಎಂದರು.ಕೃಷಿಯೇತರ ಉದ್ದೇಶಗಳಿಗೆ ಭೂಪರಿವರ್ತನೆ ಆಗದ ನಿವೇಶನಗಳು ನಗರದಲ್ಲಿ ಸಾಕಷ್ಟಿವೆ. ಇವುಗಳಿಗೆ ಬಿಬಿಎಂಪಿ ಚರಂಡಿ, ರಸ್ತೆ ಸೌಲಭ್ಯ ಒದಗಿಸಿದೆ. ಆದರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸುತ್ತಿರಲಿಲ್ಲ. ಪಾಲಿಕೆ ಆದಾಯ ಹೆಚ್ಚಿಸುವ ದೃಷ್ಟಿಯಲ್ಲಿ ಎ ಖಾತಾ ನೀಡುತ್ತೇವೆ. ಅದರಲ್ಲಿ ಜನರು ಯಾವ ರೀತಿ ಅಪ್ಲಿಕೇಷನ್ ತುಂಬಬೇಕು, ಯಾರಿಗೆಲ್ಲಾ ಖಾತೆ ವರ್ಗಾವಣೆಯಾಗಲಿದೆ ಎಂಬ ವಿಸ್ತೃತ ಮಾಹಿತಿ ಇರಲಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
