ಬೆಂಗಳೂರು : ರಸ್ತೆ ಹದಗೆಡುವುದರಿಂದ ಅಥವಾ ಗುಂಡಿಗಳಿಂದಾಗಿ ಸಂಭವಿಸುವ ಅಪಘಾತದಲ್ಲಿ ಗಾಯಗೊಂಡವರಿಗೆ ಅಥವಾ ಸಾವಿಗೀಡಾಗುವವರ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೆ ಬಿಬಿಎಂಪಿ ಮಾರ್ಗಸೂಚಿ ಸಿದ್ಧಪಡಿಸಿದೆ.
ಹದಗೆಟ್ಟ ರಸ್ತೆಯಲ್ಲಿ ಸಂಭವಿಸುವ ಅಪಘಾತದಲ್ಲಿ ಗಾಯಗೊಂಡವರಿಗೆ ಅಥವಾ ಮೃತಪಟ್ಟವರ ಕುಟುಂಬಕ್ಕೆ ಬಿಬಿಎಂಪಿಯೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿತ್ತು. ಮೃತರ ಕುಟುಂಬಕ್ಕೆ ₹ 3 ಲಕ್ಷ ಹಾಗೂ ಗಂಭೀರ ಗಾಯಗೊಂಡವರಿಗೆ ₹15 ಸಾವಿರದವರೆಗೆ ಪರಿಹಾರವನ್ನು ಬಿಬಿಎಂಪಿ ನಿಗದಿಪಡಿಸಿದೆ. ಸಣ್ಣ ಪ್ರಮಾಣದ ಗಾಯಕ್ಕೆ ₹ 5000 ಹಾಗೂ ಇತರ ಹೆಚ್ಚುವರಿ ಗಾಯಗಳಿಗೆ ತಲಾ ₹500ರಂತೆ ಪರಿಹಾರ ನೀಡಬಹುದು. ವೈದ್ಯಕೀಯ ವೆಚ್ಚದ ರೂಪದಲ್ಲಿ ₹10 ಸಾವಿರದವರೆಗೆ ಮಧ್ಯಂತರ ಪರಿಹಾರ ನೀಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ : ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ; ಕೋವಿಡ್ 2ನೇ ಅಲೆ ಎದುರಿಸಲು ಪಾಲಿಕೆ ಸಜ್ಜು
ಗಾಯದ ನೋವು ಉಳಿದುಕೊಂಡು ಮೂರ್ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದರೆ ₹10 ಸಾವಿರದವರೆಗೆ ಪರಿಹಾರ ನೀಡಬಹುದು. ಗಾಯಕ್ಕೆ ಪರಿಹಾರ ಪಡೆದ ಬಳಿಕ ಚಿಕಿತ್ಸೆಗೆ ಪ್ರತ್ಯೇಕವಾಗಿ ಪರಿಹಾರ ನೀಡಲು ಬರುವುದಿಲ್ಲ. ಎಕ್ಸ್‌ರೇ ಮತ್ತಿತರ ಪರೀಕ್ಷೆಗಳನ್ನು ನಡೆಸಿದ್ದರೆ ಅದರ ವೆಚ್ಚ ಮರುಪಾವತಿ ಮಾಡಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತರು ಅಥವಾ ಈ ಸಲುವಾಗಿಯೇ ನೇಮಕಗೊಳ್ಳಲಿರುವ ಅಧಿಕಾರಿ ಈ ಪರಿಹಾರ ವಿತರಣೆಯ ಹೊಣೆ ವಹಿಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರು ಅಥವಾ ಗಾಯಾಳುಗಳು ಪರಿಹಾರ ಕೋರಿ ಈ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದು.
ಪರಿಹಾರ ಕೋರುವವರು ಅಪಘಾತ ಸಂಭವಿಸಿದ ಒಂದು ತಿಂಗಳ ಒಳಗೆ ಬಿಬಿಎಂಪಿಯ ವಿಶೇಷ ಆಯುಕ್ತರು (ಕಂದಾಯ) ಅಥವಾ ಸಂಬಂಧಪಟ್ಟ ಅಧಿಕಾರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬೇಕು. ರಸ್ತೆ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಉಲ್ಲೇಖಿಸಿ ಪ್ರಮಾಣಪತ್ರವನ್ನು ಹಾಗೂ ಪೂರಕ ದಾಖಲೆಗಳನ್ನು ಒದಗಿಸಬೇಕು.
ಸಕಾರಣಗಳಿದ್ದರೆ ಒಂದು ತಿಂಗಳ ನಂತರ ಸಲ್ಲಿಕೆಯಾಗುವ ಅರ್ಜಿಯನ್ನು ಪುರಸ್ಕರಿಸುವ ಅಧಿಕಾರ ವಿಶೇಷ ಆಯುಕ್ತರಿಗೆ ಇರುತ್ತದೆ. ಅರ್ಜಿ ಹಾಗೂ ಸಲ್ಲಿಸಿದ ದಾಖಲೆಗಳು ಸಮಂಜಸವಾಗಿವೆ ಎಂದು ಮೇಲ್ನೋಟಕ್ಕೆ ಕಂಡು ಬಂದರೆ ವಿಶೇಷ ಆಯುಕ್ತರು ಅರ್ಜಿ ಸಲ್ಲಿಕೆಯಾದ ವಾರದೊಳಗೆ ಲಿಖಿತವಾಗಿ ಈ ಬಗ್ಗೆ ಉಲ್ಲೇಖಿಸಬೇಕು.
ಒಂದು ವೇಳೆ ಅರ್ಜಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಂಡು ಬಂದರೆ ಅದನ್ನು ಘಟನೆ ನಡೆದ ಸ್ಥಳದ ಸಂಬಂಧಪಟ್ಟ ಅಧಿಕಾರಿಗೆ ವರ್ಗಾಯಿಸಬಹುದು. ಅರ್ಜಿಯು ಸಮಂಜಸವಾಗಿದ್ದರೆ, ಅದು ಸಲ್ಲಿಕೆಯಾದ 14 ದಿನಗಳ ಒಳಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಬೇಕು. ಪರಿಹಾರ ವಿತರಣೆಗೆ ಆದೇಶವಾದ 15 ದಿನಗಳ ಒಳಗೆ ಮೊತ್ತವನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕು.
ಇದನ್ನೂ ಓದಿ : ಮಾರ್ಷಲ್ಗಳ ಮೇಲೆ ಸಾರ್ವಜನಿಕರ ದರ್ಪ: ಮಾಸ್ಕ್ ಹಾಕಿ ಅನ್ನೋದೇ ತಪ್ಪಾ?
ಅರ್ಜಿಯನ್ನು ತಿರಸ್ಕರಿಸುವುದೇ ಆದರೆ ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗುತ್ತಿದೆ ಎಂದು ಅಭಿಪ್ರಾಯವನ್ನೂ ಅಧಿಕಾರಿ ತನ್ನ ಆದೇಶದಲ್ಲಿ ಉಲ್ಲೇಖಿಸಬೇಕು. ಈ ಮಾರ್ಗಸೂಚಿಯಲ್ಲಿರುವ ಯಾವುದೇ ಅಂಶಗಳು ಅನುಷ್ಠಾನ ಕಷ್ಟಸಾಧ್ಯ ಎಂಬ ಪರಿಸ್ಥಿತಿ ಎದುರಾದ್ರೆ ಈ ವಿಚಾರವನ್ನು ವಿಶೇಷ ಆಯುಕ್ತರು ಬಿಬಿಎಂಪಿ ಆಯುಕ್ತರ ಗಮನಕ್ಕೆ ತರಬೇಕು. ಈ ಮಾರ್ಗ ಸೂಚಿಗಳು ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ಅಥವಾ ಸಿವಿಲ್ ಕೋರ್ಟ್‌ಗಳು ಪರಿಹಾರ ನೀಡುವುದಕ್ಕೆ ಸಂಬಂಧಿಸಿ ಆದೇಶ ನೀಡುವುದಕ್ಕೆ ಅಡ್ಡಿಪಡಿಸುವುದಿಲ್ಲ ಹಾಗೂ ಈಗಿರುವ ಯಾವುದೇ ಕಾನೂನಿಗೂ ಹಾನಿ ಮಾಡುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅಪಘಾತದಲ್ಲಿ ಯಾವುದಾದರೂ ಸ್ವತ್ತಿಗೆ ಹಾನಿಯಾಗಿದ್ದರೆ ಅಥವಾ ವ್ಯಕ್ತಿ ಮೃತಪಟ್ಟಿದ್ದರೆ, ಗಾಯಗೊಂಡಿದ್ದರೆ ಮೋಟಾರು ವಾಹನ ಕಾಯ್ದೆ ಪ್ರಕಾರ ಅಥವಾ ಬಿಬಿಎಂಪಿ ಮೂಲಕ, ಎರಡರಲ್ಲಿ ಒಂದರ ಮೂಲಕ ಮಾತ್ರ ಪರಿಹಾರ ಪಡೆಯಲು ಅರ್ಹರು.
ಯಾರಿಗಿದೆ ಪರಿಹಾರ ಪಡೆಯುವ ಹಕ್ಕು :
ಹದಗೆಟ್ಟ ರಸ್ತೆಯ ಕಾರಣಕ್ಕೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರು, ಅವಲಂಬಿತರು ಅಥವಾ ಬಂಧುಗಳು ಮಾರ್ಗಸೂಚಿ ಪ್ರಕಾರ ಪರಿಹಾರ ಪಡೆಯುವ ಹಕ್ಕು ಹೊಂದಿರುತ್ತಾರೆ. ಆ ವ್ಯಕ್ತಿ ವಾಹನದಲ್ಲಿ ಆ ರಸ್ತೆಯಲ್ಲಿ ಸಾಗಿರಬೇಕು ಅಥವಾ ಪಾದಚಾರಿಯಾಗಿ ಆ ರಸ್ತೆಯನ್ನು ಬಳಸಿರಬೇಕು. ಹದಗೆಟ್ಟ ರಸ್ತೆಯ ಕಾರಣಕ್ಕೆ ಸಂಭವಿಸುವ ಅಪಘಾತದಲ್ಲಿ ಗಾಯಗೊಳ್ಳುವವರೂ ಪರಿಹಾರ ಪಡೆಯುವ ಹಕ್ಕು ಹೊಂದಿರುತ್ತಾರೆ.