ಬೆಂಗಳೂರು : ನಗರದ ಮಲ್ಲತ್ತಹಳ್ಳಿ ಕೆರೆ ಪ್ರದೇಶದ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದಕ್ಕಾಗಿ ಒಳಚರಂಡಿ ನೀರು ಘಟಕದಿಂದ ಮಳೆನೀರು ಕಾಲುವೆಯನ್ನು ತಿರುಗಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿರುವ ಬೆಂಗಳೂರು ಮಹಾನಗರ ಪಾಲಿಕೆ, ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದಾಗಿ ಹೈಕೋರ್ಟ್ಗೆ ತಿಳಿಸಿದೆ.
ನಗರದ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಸಂಬಂಧ ಸಿಟಿಜನ್ ಆ್ಯಕ್ಷನ್ ಗ್ರೂಪ್ ಮತ್ತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಬಿಬಿಎಂಪಿ ತಿಳಿಸಿದೆ.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಹಾಜರಾಗಿ, ಬಿಬಿಎಂಪಿ ಮಳೆ ನೀರು ನಿರ್ವಹಣಾ ವಿಭಾಗದ ಮುಖ್ಯ ಇಂಜಿನಿಯರ್ ಬಸವರಾಜ್ ಆರ್. ಕಬಡೆ ಅವರು ಸಲ್ಲಿಸಿರುವ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು 2019ರ ಸೆ.20ರಂದು ಸರ್ಕಾರ ನೀಡಿರುವ ನಿರ್ದೇಶನಗಳ ಅನುಸಾರ ಕೈಗೊಳ್ಳಲಾಗಿದೆ. ಆ ಆದೇಶದಲ್ಲಿ ಸರ್ಕಾರ ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿಯಲ್ಲಿ ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿಯ ಕ್ರಿಯಾ ಯೋಜನೆಯನ್ನು ಅನುಮೋದಿಸಿದೆ. ಅದರ ಪ್ರಕಾರ ಕೆರೆ ಏರಿ ಮತ್ತು ಕಾಲುದಾರಿ ಅಭಿವೃದ್ಧಿ, ತಡೆಗೋಡೆ ನಿರ್ಮಾಣ ಮತ್ತು ಗಾಜಿನ ಮನೆ, ತೂಗುಸೇತುವೆ ನಿರ್ಮಾಣ ಮತ್ತು ಮಕ್ಕಳ ಆಟದ ರೈಲಿಗೆ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿದೆ. ಈ ಕಾಮಗಾರಿಗಳಿಗೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ. ಈ ಮಧ್ಯೆ ತಡೆಗೋಡೆ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಲ್ಲತ್ತಹಳ್ಳಿ ಕೆರೆ ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ: ಬಿಬಿಎಂಪಿ, ಪಿಸಿಬಿ ವಿರುದ್ಧ ದೂರು
ಇನ್ನು, ಮಳೆನೀರು ಕಾಲುವೆಯನ್ನು ಕೆರೆ ಪ್ರದೇಶದ ತುದಿಯವರೆಗೂ ವಿಸ್ತರಿಸಲು ಬಿಬಿಎಂಪಿ ತಾಂತ್ರಿಕ ಮತ್ತು ಪರಿಸರ ಸಂಕ್ಷಣಾ ಸಮಿತಿ 2021ರ ಡಿ.30ರಂದು ನಿರ್ಣಯ ಕೈಗೊಂಡಿದೆ. ಈ ನಿರ್ಣಯಕ್ಕೆ ಸರ್ಕಾರವು ಅನುಮೋದನೆ ನೀಡಿದ್ದು, 22.40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. 2022ರ ಮೇ 12ರಂದು ಬಿಬಿಎಂಪಿ ಕಾರ್ಯಾದೇಶ ಹೊರಡಿಸಿದೆ. ಕಾಮಗಾರಿಯು ಮುಗಿಯುವ ತಂತಕ್ಕೆ ತಲುಪಿದೆ ಎಂದು ತಿಳಿಸಿದರು.
ಅಲ್ಲದೇ, ಮಲ್ಲತ್ತಹಳ್ಳಿ ಕೆರೆಯನ್ನು ಬಿಡಿಎ 2016ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಿದೆ. ಆ ಸಂದರ್ಭದಲ್ಲಿ ನೀರು ಹರಿಯುವ ಪ್ರದೇಶ 42 ಎಕರೆಯಷ್ಟಿತ್ತು. ಇದೀಗ ಬಿಬಿಎಂಪಿಯು ಒತ್ತುವರಿ ತೆರವು ಮತ್ತು ಹೂಳು ಎತ್ತಲು ಕ್ರಮ ಕೈಗೊಂಡಿರುವ ಪರಿಣಾಮ ನೀರು ಹರಡುವ ಪ್ರಮಾಣ 44 ಎಕರೆಗೆ ಹೆಚ್ಚಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಅದನ್ನು ದಾಖಲಿಸಿಕೊಂಡ ಹೈಕೋರ್ಟ್, ಪ್ರತಿ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ನ.24ಕ್ಕೆ ಮುಂದೂಡಿದೆ.