ಬೆಂಗಳೂರು: ಕೋವಿಡ್ ಲಸಿಕೆ ಹಂಚಿಕೆಗೆ ಗುರಿ ನಿಗದಿಪಡಿಸಿದ್ದ ಬಿಬಿಎಂಪಿ ಟಾರ್ಗೆಟ್ ತಲುಪಲು ವಿಫಲವಾಗಿದೆ.
ಕಳೆದ ವಾರ ಈ ಬಗ್ಗೆ ಮಾಹಿತಿ ನೀಡಿದ್ದ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ನಿತ್ಯ 75 ಸಾವಿರ ಮಂದಿಗೆ ಲಸಿಕೆ ಕೊಡಲು ಸಿದ್ಧತೆ ನಡೆದಿದೆ. ಹಿಂದೆ 30 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿತ್ತು. 30 ಹಾಸಿಗೆಗಳಿರುವ ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಾದರೆ ಒಟ್ಟು 500 ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಬಹುದು. ಮುಂದಿನ ದಿನಗಳಲ್ಲಿ 1 ಲಕ್ಷ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದಿದ್ದರು. ಆದರೆ, ಒಂದು ವಾರ ಕಳೆದರೂ ಕೇವಲ 30 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ.
ಓದಿ : ಕೋವಿಡ್ ಟೆಸ್ಟ್ ವರದಿ ಇನ್ಮುಂದೆ ಬಿಬಿಎಂಪಿ ವೆಬ್ಸೈಟ್ನಲ್ಲೇ ಲಭ್ಯ: ಬಿಬಿಎಂಪಿ ಆಯುಕ್ತ
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಲಾಗಿದೆ. ಬಿಬಿಎಂಪಿಯ 144 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ದಿನಕ್ಕೆ ನೂರು ಜನರಿಗೆ ಲಸಿಕೆ ನೀಡಲು ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ ಶೇ. 75ರಷ್ಟು ಆನ್ಲೈನ್ ನೋಂದಣಿ ಮಾಡಿಕೊಂಡವರು ಮತ್ತು ಶೇ. 25 ವಾಕ್ - ಇನ್ (ಆನ್ ಲೈನ್ ನೋದಣಿ ಮಾಡದೆ ನೇರವಾಗಿ ಬಂದವರಿಗೆ ) ಲಸಿಕೆ ವಿತರಿಸಲು ಯೋಜನೆ ರೂಪಿಸಲಾಗಿದೆ. ನೋಂದಣಿ ಮಾಡಿದವರಿಗೆ, ಬೇರೆ ದಿನಗಳಿಗೆ ಬದಲಾವಣೆ ಮಾಡಲೂ ಅವಕಾಶ ಇದೆ. ಜೊತೆಗೆ ಆನ್ಲೈನ್ ನೋಂದಣಿ ಮಾಡಲಾಗದವರಿಗೆ ಅಕ್ಕಪಕ್ಕದ ಜನರನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಿಕೊಡಲು ಸೂಚಿಸಲಾಗಿದೆ. ಈ ಬಗ್ಗೆ ಪ್ರತೀ ಪ್ರದೇಶಗಳಿಗೆ ಆಟೋ ಮೂಲಕ ಪ್ರಚಾರ ಮಾಡಿ, ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಲಸಿಕೆ ಪಡೆದುಕೊಳ್ಳಲು ಅವಕಾಶ ಇದೆ ಎಂದು ತಿಳಿಸಲಾಗುತ್ತಿದೆ. ಪ್ರತಿದಿನ 35 ಸಾವಿರ ಜನರಿಗೆ ಲಸಿಕೆ ನೀಡಲಾಗ್ತಿದೆ. ಲಸಿಕೆ ವಿತರಣೆ ಹೆಚ್ಚಿಸುವ ಸಲುವಾಗಿ ಪ್ರಚಾರ ಮಾಡಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಧಾರ್ ಕಾರ್ಡ್, ಮೊಬೈಲ್ ಹಿಡಿದುಕೊಂಡು ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಅಥವಾ ಖಾಸಗಿಯಲ್ಲಿ 250 ರೂ. ಕೊಟ್ಟು ಲಸಿಕೆ ಪಡೆದುಕೊಳ್ಳಬಹುದು ಎಂದಿದ್ದಾರೆ.
ಲಸಿಕೆ ವ್ಯರ್ಥಗೊಳಿಸದಂತೆ ಸೂಚನೆ: ಒಂದು ಲಸಿಕೆ ಬಾಟಲ್ ತೆರೆದ ಬಳಿಕ ಹತ್ತು ಜನರಿಗೆ ಲಸಿಕೆ ಕೊಡಬಹುದಾಗಿದೆ. ಆದರೆ ಸಂಜೆ ವೇಳೆಗೆ ನಾಲ್ಕು ಜನ ಮಾತ್ರ ಬಂದರೆ ಉಳಿದ ಲಸಿಕೆ ವ್ಯರ್ಥವಾಗಬಹುದು. ಹಾಗಾಗಿ ಆರೋಗ್ಯ ಸಿಬ್ಬಂದಿ ಹತ್ತು ಜನರು ಇರುವ ರೀತಿ ನೋಡಿಕೊಳ್ಳಬೇಕು. ಲಸಿಕೆ ವ್ಯರ್ಥ ಮಾಡಬಾರದೆಂದು ಸೂಚನೆ ನೀಡಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.