ಬೆಂಗಳೂರು: ಬಿ ಖಾತೆಗಳನ್ನು ಎ ಖಾತಾ ಮಾಡುವುದು, ಅಕ್ರಮ ಸಕ್ರಮ ಜಾರಿ, ಗ್ರೇಡ್ ಸಪರೇಟರ್ ಯೋಜನೆಗಳು, ಕೆರೆಗಳ ಪುನಶ್ಚೇತನ, ಮಾರುಕಟ್ಟೆಗಳ ನವೀಕರಣ, ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ನಾಳೆ ಮಂಡನೆಯಾಗಲಿರುವ ರಾಜ್ಯ ಬಜೆಟ್ ಮೇಲೆ ಬಿಬಿಎಂಪಿಗೆ ಸಾಕಷ್ಟು ನಿರೀಕ್ಷೆಗಳಿವೆ. ಅವುಗಳನ್ನು ಒಂದೊಂದಾಗಿ ನೋಡುವುದಾದರೆ,
1. 243 ವಾರ್ಡ್‌ಗಳಲ್ಲಿ 243 ಹೈಟೆಕ್ ಆಸ್ಪತ್ರೆ: 243 ಹೈಟೆಕ್ ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ವಾರ್ಡ್‌ಗಳ ಮರು ವಿಂಗಡಣಾ ಕಾರ್ಯ ಭರದಿಂದ ಸಾಗಿದೆ. ಈಗ ವಾರ್ಡ್‌ಗೊಂದರಂತೆ ಸುಧಾರಿತ ಆಸ್ಪತ್ರೆಗಳನ್ನು (ಸಣ್ಣಪುಟ್ಟ ಚಿಕಿತ್ಸೆ ನಡೆಸುವ ಸಾಮರ್ಥ್ಯ) ನಿರ್ಮಿಸಲು ಸರ್ಕಾರಕ್ಕೆ ಪಾಲಿಕೆ ಪ್ರಸ್ತಾವನೆ ಕಳುಹಿಸಿದೆ. ಈಗಾಗಲೇ 169 ವಾರ್ಡ್‌ಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು ಹೊಸದಾಗಿ 84 ಆಸ್ಪತ್ರೆಗಳ ನಿರ್ಮಾಣಕ್ಕೆ ಅನುದಾನ ನೀಡಬೇಕಿದೆ. ಉಳಿದಂತೆ, ವಾರ್ಡ್‌ಗೊಂದರಂತೆ 3 ಹಾಸಿಗೆ ಸಾಮರ್ಥ್ಯದ ಕ್ಲಿನಿಕ್ ತೆರೆಯಲು ಪಾಲಿಕೆ ಬೇಡಿಕೆ ಸಲ್ಲಿಸಿದೆ.
2. ಕೆರೆಗಳ ಸುಪರ್ದಿಗೆ ಆದ್ಯತೆ: ನಗರದ ಪ್ರಾಕೃತಿಕ ಸೌಂದರ್ಯ ಹೆಚ್ಚಿಸುವ ಬೆಂಗಳೂರು ವ್ಯಾಪ್ತಿಯಲ್ಲಿ 800ಕ್ಕೂ ಅಧಿಕ ಕೆರೆಗಳಿದ್ದು ಜಿಲ್ಲಾ ಪಂಚಾಯಿತಿ, ಅರಣ್ಯ ವಿಭಾಗ, ಬಿಡಿಎ ಹಾಗೂ ಬಿಬಿಎಂಪಿ ನಡುವೆ ಹಂಚಿಕೆ ಆಗಿವೆ. ಪ್ರಸ್ತುತ 205 ಕೆರೆಗಳು ಮಾತ್ರ ಪಾಲಿಕೆ ವ್ಯಾಪ್ತಿಗೆ ಒಳಪಡುತ್ತಿವೆ. ಉಳಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಿಡಿಎ ಮತ್ತು ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಎಲ್ಲ ಕೆರೆಗಳ ನಿರ್ವಹಣೆ ಮಾಡಲು ಪಾಲಿಕೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಈಗಾಗಲೇ 90ಕ್ಕೂ ಹೆಚ್ಚು ಕೆರೆಗಳನ್ನು ಪುನಶ್ಚೇತನ ಮಾಡಲಾಗಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ತುಂಬಿ ಉತ್ತಮ ನೀರು ಸಂಗ್ರಹಣೆ ಆಗುತ್ತಿದೆ. ಜತೆಗೆ, ಅಂತರ್ಜಲ ಹೆಚ್ಚಳವಾಗುತ್ತಿದೆ.
3. ಮಾರುಕಟ್ಟೆಗಳ ನವೀಕರಣ: ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾದ ಕೆ.ಆರ್.ಮಾರುಕಟ್ಟೆ ನವೀಕರಣ ಕಾರ್ಯ ಕೈಗೊಂಡಿದ್ದು, ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಶಿವಾಜಿನಗರ ರಸೆಲ್ ಮಾರುಕಟ್ಟೆಯ ನವೀಕರಣಕ್ಕೆ ಯೋಜನೆ ಸಿದ್ಧವಾಗಿದ್ದು, ಕಾಮಗಾರಿ ಆರಂಭಿಸಬೇಕಿದೆ. ಬಿಡಿಎ ನಿರ್ಮಿಸುತ್ತಿರುವ ಮಲ್ಲೇಶ್ವರಂನ ಹೂವಿನ ಮಾರುಕಟ್ಟೆ ಅಭಿವೃದ್ಧಿಗೆ ಚುರುಕು ನೀಡುವುದು, ಯಶವಂತಪುರ, ಕಲಾಸಿಪಾಳ್ಯ ಹಾಗೂ ಸಿಂಗೇನ ಅಗ್ರಹಾರ ಮಾರುಕಟ್ಟೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಹಿಂದೆ ಸರ್ಕಾರವು ನಗರದ 8 ದಿಕ್ಕುಗಳ ಹೊರವಲಯಗಳಲ್ಲಿ ಉಪ ಮಾರುಕಟ್ಟೆ ನಿರ್ಮಿಸುವುದಾಗಿ ತಿಳಿಸಿದ್ದು, 2022-23ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆಯಿದೆ.
4. ದಂಡ ಪ್ರಮಾಣ ಶೇ.15 ರವರೆಗೆ ಹೆಚ್ಚಳಕ್ಕೆ ಪ್ರಸ್ತಾಪ: ರಾಜಧಾನಿಯಲ್ಲಿ ಕಟ್ಟಡಗಳನ್ನು ಪಾಲಿಕೆ ನೀಡಿದ ನಕ್ಷೆಯನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದು, ಇಂತಹ ಕಟ್ಟಡಗಳನ್ನು ಅಕ್ರಮ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಶೇ. 5 ರ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಮಾಡಿದ ಮಾಲೀಕರಿಗೆ ದಂಡ ಶುಲ್ಕ ವಸೂಲಿ ಮಾಡಿ ಸ್ವಾಧೀನ ಪತ್ರ ಕೊಡಲಾಗುತ್ತಿದೆ. ದಂಡ ಪ್ರಮಾಣವನ್ನು ಶೇ.15ರವರೆಗೆ ಹೆಚ್ಚಳ ಮಾಡುವಂತೆ ಬಿಬಿಎಂಪಿ ಸರ್ಕಾರಕ್ಕೆ 2 ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಮುಂದಿನ ಪಾಲಿಕೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಅಕ್ರಮ-ಸಕ್ರಮ ಯೋಜನೆ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ, ಮತ್ತೊಂದೆಡೆ, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5. ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಹೆಚ್ಚಳ: ನಗರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್, ಇಂಧನದ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ವಿದ್ಯುತ್‌ಚಾಲಿತ ವಾಹನಗಳಿಗೆ ಪ್ರೋತ್ಸಾಹಧನ ನೀಡುವ ನಿಟ್ಟಿನಲ್ಲಿ ತೆರಿಗೆ ಇಳಿಕೆ ಹಾಗೂ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸ್ಟಾರ್ಟ್‌ಅಪ್ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಾಧ್ಯತೆಯಿದೆ. ಜತೆಗೆ, ಸಿಎನ್‌ಜಿ ಗ್ಯಾಸ್ ಬಳಸುವ ವಾಹನಗಳಿಗೆ ಉತ್ತೇಜನ ನೀಡಲು ಈಗಾಗಲೇ 100 ಗ್ಯಾಸ್ ಬಂಕ್ ಗಳನ್ನು ತೆರೆಯಲು ಅನುಮತಿ ನೀಡಿದ್ದು, ಅವುಗಳ ಪ್ರಮಾಣ ಹೆಚ್ಚಳಕ್ಕೆ ಅನುಮತಿ ಸಿಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
6. 'ಎ' ಟು 'ಬಿ' ಸಾವಿರ ಕೋಟಿ ರೂ ಅದಾಯ ಸಂಗ್ರಹಿಸುವ ಗುರಿ: ಆಸ್ತಿಗಳ ಮಾಲೀಕರು ಬ್ಯಾಂಕ್ ಸಾಲ ಪಡೆಯುವುದಕ್ಕೆ ಆಸ್ತಿ ಮಾರಾಟಕ್ಕೆ ಪರದಾಡುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಚಿಂತನೆ ಮಾಡಿದ್ದು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಬಜೆಟ್ ಮೂಲಕ ಎಲ್ಲಾ 'ಬಿ' ಖಾತೆಗಳನ್ನು 'ಎ' ಖಾತೆಗಳನ್ನಾಗಿ ಮಾಡಲು ಸೂಕ್ತ ಕಾಯ್ದೆ ರೂಪಿಸುವ ಸಾಧ್ಯತೆಯಿದೆ. 'ಎ' ಖಾತಾ ನೀಡುವ ವೇಳೆ ದುಬಾರಿ ಶುಲ್ಕ ವಿಧಿಸುವ ಮೂಲಕ ಸುಮಾರು 10 ಸಾವಿರ ಕೋಟಿ ರೂ ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ.