ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎರವಲು ಸೇವೆಯಡಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಂಜಿನಿಯರುಗಳನ್ನು ಅವರ ಕೋರಿಕೆ ಮೇರೆಗೆ ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಮುಂದಿನ ಎರಡು ತಿಂಗಳ ಒಳಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್, ಪಾಲಿಕೆ ಮತ್ತು ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವದ್ಧಿ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ವಿ. ಶ್ರೀನಿವಾಸ್ ವಾದ ಮಂಡಿಸಿ, ಪಾಲಿಕೆಯಲ್ಲಿ ಎರವಲು ಸೇವೆ ಆಧಾರದಲ್ಲಿ ಅಧಿಕಾರಿ ಮತ್ತು ನೌಕರರನ್ನು ನಿಯೋಜಿಸಿಕೊಳ್ಳಲು 2011ರ ನ.11ರಂದು ಬಿಬಿಎಂಪಿ ಮಾರ್ಗಸೂಚಿಗಳನ್ನು ರೂಪಿಸಿದೆ. ಅದರಂತೆ ಎರವಲು ಸೇವೆ ಗರಿಷ್ಠ ಅವಧಿಯನ್ನು 3 ವರ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ, ಕೆಲವು ಇಂಜಿನಿಯರುಗಳು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು 10 ವರ್ಷಗಳ ನಂತರವೂ ಅದೇ ಜಾಗದಲ್ಲಿ ಠಿಕಾಣಿ ಹೂಡಿದ್ದಾರೆ.
ಅವರ ಹೊರತಾಗಿ ಎರವಲು ಸೇವೆ ಮೇಲೆ ನಿಯೋಜನೆಗೊಂಡು ನಿಗದಿತ ಗರಿಷ್ಠ ಅವಧಿ ಮುಗಿದಿರುವ ಕೆಲವು ಇಂಜಿನಿಯರುಗಳು ಅವರ ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಕೋರಿ 2019ರ ಮೇ 20ರಂದು ಸಲ್ಲಿಸಿದ್ದಾರೆ. ಆದರೆ, ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಧಿಕಾರಿಗಳು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ವಾದ ಮನ್ನಿಸಿದ ಪೀಠ ಮನವಿ ಸಲ್ಲಿಸಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್ ಕಳಿಸುವ ನಿಟ್ಟಿನಲ್ಲಿ ಎರಡು ತಿಂಗಳ ಒಳಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಮತ್ತು ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.