ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ವಾರು ಅಂತಿಮ ಮೀಸಲು ಪಟ್ಟಿಯನ್ನು ಮುಂದಿನ ಎರಡು ವಾರಗಳ ಒಳಗೆ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ನಿಗದಿತ ಅವಧಿಯೊಳಗೆ ಪಾಲಿಕೆಗೆ ಚುನಾವಣೆ ನಡೆಸಲು ಅಗತ್ಯವಿರುವ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ನಿಗದಿಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ರಾಜ್ಯ ಸರ್ಕಾರದ ಪರ ವಾದಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ವಾರ್ಡ್ ವಾರು ಮೀಸಲು ಕರಡು ಪಟ್ಟಿಯನ್ನು ಸೆಪ್ಟೆಂಬರ್ 14ರಂದು ಅಂತಿಮಗೊಳಿಸಲಾಗಿದೆ. ಈ ಸಂಬಂಧ ಸಾರ್ವಜನಿಕರಿಂದ ಒಟ್ಟು 900 ಆಕ್ಷೇಪಣೆಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಅಂತಿಮ ಮೀಸಲು ಪಟ್ಟಿ ಪ್ರಕಟಿಸಲು ಎರಡು ವಾರ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದರು. ಚುನಾವಣಾ ಆಯೋಗದ ಪರ ವಕೀಲರು ಮಾಹಿತಿ ನೀಡಿ, ಅಕ್ಟೋಬರ್ 19ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಿ, ನವೆಂಬರ್ 30ರೊಳಗೆ ಅಂತಿಮ ಗೊಳಿಸಲಾಗುವುದು ಎಂದರು.
ಹೇಳಿಕೆಗಳನ್ನು ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು. 2015ರ ಆಗಸ್ಟ್ 25 ಬಿಬಿಎಂಪಿ ಚುನಾವಣೆ ನಡೆದು ಸೆಪ್ಟೆಂಬರ್ 11ರಂದು ಪಾಲಿಕೆ ರಚನೆಯಾಗಿತ್ತು. 2020 ಸೆಪ್ಟೆಂಬರ್ 10ಕ್ಕೆ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯಬೇಕಿದೆ.