ಬೆಂಗಳೂರು : ನ್ಯಾಯಾಲಯದ ಸೂಚನೆಯ ನಂತರವೂ ನಗರದ ಕಂಟೈನ್ಮೆಂಟ್ ವಲಯಗಳಲ್ಲಿರುವ ಬಡವರಿಗೆ ಆಹಾರ ಕಿಟ್ ಪೂರೈಸದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ಮೂಲಕ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಆದೇಶಿಸಿದೆ.
ಲಾಕ್ಡೌನ್ನಿಂದ ಜನರಿಗೆ ಉಂಟಾಗುತ್ತಿರುವ ಅನಾನುಕೂಲಗಳ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠ, ಕಂಟೈನ್ಮೆಂಟ್ ಪ್ರದೇಶದ ಬಡವರಿಗೆ ಆಹಾರ ಕಿಟ್ ಹಂಚುವಂತೆ ಕೋರ್ಟ್ ಜೂನ್ 25 ಮತ್ತು ಜುಲೈ 9ರಂದು ನಿರ್ದೇಶಿಸಿದೆ. ಆದರೆ, ಪಾಲಿಕೆ ಯಾವ ಆದೇಶವನ್ನು ಪಾಲಿಸಿಲ್ಲ. ಪ್ರತಿ ಬಾರಿ ದಾಖಲೆಗಳು, ಕಡತಗಳು ಹಾಗೂ ಸುತ್ತೋಲೆಗಳನ್ನೇ ತೋರಿಸುತ್ತಿದೆ. ಕೇವಲ ಸುತ್ತೋಲೆಗಳಿಂದ ಯಾರಿಗೆ ಉಪಯೋಗವಾಗಿದೆ. ಬಿಬಿಎಂಪಿ ಪ್ರತಿ ಹಂತದಲ್ಲೂ ಬೇಜವಾಬ್ದಾರಿ ತೋರುತ್ತಿದೆ ಎಂದು ಪಾಲಿಕೆ ಅಧಿಕಾರಿಗಳಿಗೆ ಛೀಮಾರಿ ಹಾಕಿತು.
ಇದಕ್ಕೆ ಸಮಜಾಯಿಷಿ ನೀಡಲು ಯತ್ನಿಸಿದ ಪಾಲಿಕೆ ಪರ ವಕೀಲರು, ಕೋವಿಡ್-19 ನಿರ್ವಹಣೆಯಲ್ಲಿ ಪಾಲಿಕೆ ಗಂಭೀರವಾಗಿದೆ. ನಮ್ಮ ಕಾರ್ಯವೈಖರಿಯನ್ನು ತಿದ್ದುಕೊಳ್ಳುತ್ತೇವೆ ಎಂದರು.
ಸಮಜಾಯಿಷಿ ಒಪ್ಪದ ಪೀಠ, ಪಾಲಿಕೆಯ ಇಂತಹ ಸಬೂಬುಗಳನ್ನು ಕೋರ್ಟ್ ಆಗಲಿ, ಜನರಾಗಲಿ ನಂಬುವುದಿಲ್ಲ. ಒಬ್ಬ ವ್ಯಕ್ತಿಗೆ ಒಂದು ಕಿಟ್ ಲೆಕ್ಕದಲ್ಲಿ ಕೊಡುವ ಆಹಾರವನ್ನು ಒಂದು ಕುಂಟುಂಬಕ್ಕೆ ನೀಡಿದ್ದಾರೆ. ಕಂಟೈನ್ಮೆಂಟ್ ವಲಯಗಳಲ್ಲಿರುವ ಜನರು ದಿನವೆಲ್ಲಾ ಸುತ್ತಿದರೂ ದುಡಿಮೆಯಿಲ್ಲದೆ ವಾಪಸ್ಸಾಗುತ್ತಾರೆ ಎಂದು ಸ್ವತಃ ಬಿಬಿಎಂಪಿಯೇ ಹೇಳುತ್ತದೆ. ಇದೊಂದೇ ಕಾರಣ ಸಾಕು ಪಾಲಿಕೆಯನ್ನು ಅಮಾನತಿನಲ್ಲಿ ಇರಿಸಲು. ಬಿಬಿಎಂಪಿ ವೈಫಲ್ಯ ಅನೇಕ ಪ್ರಕರಣಗಳಲ್ಲಿ ಕೋರ್ಟ್ ಗಮನಕ್ಕೆ ಬಂದಿದೆ. ಈಗಲೂ ಬಿಬಿಎಂಪಿಯನ್ನು ನಂಬಿಕೊಂಡು ಕೂತರೆ ಪರಿಸ್ಥಿತಿ ಭೀಕರವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರಕ್ಕೂ ತರಾಟೆ : ಹಿಂದಿನ ವಿಚಾರಣೆ ವೇಳೆ ಪಾಲಿಕೆ, ಕಂಟೈನ್ಮೆಂಟ್ ವಲಯದ ಬಡವರಿಗೆ ಆಹಾರ ನೀಡಲು ತನಗೆ ಸಾಧ್ಯವಿಲ್ಲ ಎಂದು ಹೇಳಿತ್ತು. ಪಾಲಿಕೆಯ ಈ ಬೇಜವಾಬ್ದಾರಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ರಾಜ್ಯ ಸರ್ಕಾರ ತನ್ನ ಆಡಳಿತ ಯಂತ್ರ ಉಪಯೋಗಿಸಿ ಕಂಟೈನ್ಮೆಂಟ್ ವಲಯದ ಜನರಿಗೆ ಆಹಾರ ಸಾಮಾಗ್ರಿ ನೀಡಬೇಕು ಎಂದು ಸೂಚನೆ ನೀಡಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಉತ್ತರ ನೀಡಿಲ್ಲ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಪೀಠ, ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದು ವಿವರಣೆ ನೀಡುವಂತೆ ನಿರ್ದೇಶಿಸಿದೆ.