ಬೆಂಗಳೂರು: ಹತ್ತು ಸಾವಿರ ಬೆಡ್ಗಳ ವ್ಯವಸ್ಥೆ ಕಲ್ಪಿಸಿದ್ದ ರಾಜ್ಯದಲ್ಲೇ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಎಂದು ಹೆಸರುವಾಸಿಯಾಗಿದ್ದ ಬಿಐಇಸಿ, ಸಿಸಿಸಿ ಕೇಂದ್ರವನ್ನು ಮುಚ್ಚಲು ಬಿಬಿಎಂಪಿ ನಿರ್ಧರಿಸಿದೆ.
ಕೋವಿಡ್ ಪಾಸಿಟಿವ್ ರೋಗಿಗಳು ಹೆಚ್ಚಾಗಿ ಬಾರದ ಹಿನ್ನಲೆ ಮತ್ತು ಎಲ್ಲರೂ ಹೋಂ ಐಸೋಲೇಶನ್ಗೆ ಒಳಗಾಗುತ್ತಿರುವ ಸಂಬಂಧ ಸಿಸಿಸಿ ಕೇಂದ್ರ ಖಾಲಿ-ಖಾಲಿಯಾಗಿದೆ. ಹೀಗಾಗಿ ಬಿಐಇಸಿ ಮುಚ್ಚಲು ಬಿಬಿಎಂಪಿ ತೀರ್ಮಾನಿಸಿದೆ.
ಕೊರೊನಾ ಸೋಂಕಿನ ಲಕ್ಷಣ ಇಲ್ಲದವರ (ಎಸಿಮ್ಟಮ್ಯಾಟಿಕ್) ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲು 11 ಕೋಟಿ ವೆಚ್ಚದಲ್ಲಿ 6,500 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಲ್ಲಿ ಮೂರು ಸಾವಿರ ಹಾಸಿಗೆ ಆರಂಭದಲ್ಲಿ ಬಳಸಲಾಗುತ್ತಿತ್ತು. ಇದರಲ್ಲಿ ರೋಗಿಗಳ ಆರೈಕೆಗೆ 1,500, ವೈದ್ಯರು, ಸಿಬ್ಬಂದಿಗಳಿಗೆ 1,500 ಮೀಸಲಿಡಲಾಗಿತ್ತು. ಆದರೆ ಕೊರೊನಾ ರೋಗಿಗಳು ದಾಖಲಾಗದ ಹಿನ್ನಲೆ, ಸೆಪ್ಟೆಂಬರ್ 15 ರಂದು ಸಂಪೂರ್ಣವಾಗಿ ಮುಚ್ಚಿಬಿಡಲು ನಿರ್ಧರಿಸಲಾಗಿದೆ.
ಇನ್ನು ಸಿಸಿಸಿ ಕೇಂದ್ರಕ್ಕೆ ಖರೀದಿಸಿರುವ ಹಾಸಿಗೆ, ಫ್ಯಾನ್ಸ್, ಹಾಗೂ ವಿವಿಧ ಪೀಠೋಪಕರಣಗಳು, ವಸ್ತುಗಳನ್ನು ಸರ್ಕಾರಿ ಸ್ವಾಮ್ಯದ ವಸತಿಗೃಹ, ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ಹಾಸ್ಟೆಲ್ಗಳಿಗೆ, ಸಮಾಜಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಿಗೆ ನೀಡಲು ಉದ್ದೇಶಿಸಲಾಗಿದೆ.