ಬೆಂಗಳೂರು: ನಗರದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಸಿದ ಆತಂಕ, ಅವಘಡಗಳು ಇನ್ನು ಮುಂದೆ ನಡೆಯದಂತೆ ಆರೋಗ್ಯ ವ್ಯವಸ್ಥೆಯನ್ನು ಭದ್ರಗೊಳಿಸಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಲ್ಲ ವಾರ್ಡ್ ಗಳಲ್ಲೂ ಇಲ್ಲ. 198 ವಾರ್ಡ್ಗಳ ಪೈಕಿ ಕೇವಲ ಕೇವಲ 141 ವಾರ್ಡ್‌ಗಳಲ್ಲಿ ಪಿಹೆಚ್ಸಿ ಗಳು ಕಾರ್ಯ ನಿರ್ವಹಿಸುತ್ತಿದ್ದು, ಉಳಿದ 57 ವಾರ್ಡ್ಗಳಲ್ಲಿಯೂ ಆಸ್ಪತ್ರೆ ಆರಂಭಿಸಲು ಸರ್ಕಾರ ಅನುಮತಿ ನೀಡಿ, 10 ಕೋಟಿ ರೂ. ಬಿಡುಗಡೆ ಮಾಡಿದೆ.
ಆದರೆ 114 ಕೋಟಿ ರೂ. ಅನ್ನು ಪಿಹೆಚ್ಸಿ ಗಳ ನಿರ್ಮಾಣಕ್ಕೆ ಅನುದಾನ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಗದಲ್ಲಿ ತುರ್ತಾಗಿ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸಲು ಕೂಡಾ ಪಾಲಿಕೆ ಚಿಂತಿಸಿದ್ದು, ಈಗಾಗಲೇ ಸಿದ್ಧತೆಯಲ್ಲಿ ತೊಡಗಿದೆ. 20 ಬಾಡಿಗೆ ಕಟ್ಟಡಗಳನ್ನು ಅಂತಿಮಗೊಳಿಸಲಾಗಿದ್ದು, ಈ ತಿಂಗಳಾಂತ್ಯದಲ್ಲಿ ಆರಂಭಗೊಳಿಸಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ತಿಳಿಸಿದರು.
ನಗರದ 28 ವಾರ್ಡ್‌ಗಳಲ್ಲಿ ಸ್ಪೆಷಾಲಿಟಿ ಆಸ್ಪತ್ರೆ (ಸೆಕೆಂಡರಿ ಹಾಸ್ಪಿಟಲ್) ಹಾಗೂ ನಾಲ್ಕು ಕಡೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆರಂಭಿಸಲು (ಟರ್ಷ್ಯರಿ ಕೇರ್ ಹಾಸ್ಪಿಟಲ್) 1,000 ಕೋಟಿ ರೂಪಾಯಿ ಯೋಜನೆಗೆ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಸಿದೆ. 28 ಸ್ಪೆಷಾಲಿಟಿ ಆಸ್ಪತ್ರೆ ಪೈಕಿ 4 ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಎಲ್ಲ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ಮಾಜಿ ಸಂಸದ ಮಾದೇಗೌಡ ವಿಧಿವಶ: ಇಂದು ನಡೆಯಲಿರುವ ಅಂತ್ಯಕ್ರಿಯೆ
ಈ ಬಗ್ಗೆ ಮಾತನಾಡಿದ ವಿಶೇಷ ಆಯುಕ್ತ ಡಿ. ರಂದೀಪ್, ನಗರದ ಆಸ್ಪತ್ರೆಗಳ ಸುಧಾರಣೆ, ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಬಜೆಟ್ ಅಪ್ರೂವಲ್ ಕೊಟ್ಟರೆ, ಕಾರ್ಯಾರಂಭಗೊಳಿಸಲಾಗುವುದು. ಸರ್ಕಾರದ ತಾತ್ವಿಕ ಅನುಮೋದನೆ ಸಿಕ್ಕರೆ ಇತರೆ ತಯಾರಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.