ಬೆಂಗಳೂರು: ಅನಧಿಕೃತ ಒಎಫ್ಸಿ ಕೇಬಲ್ಗಳ ಸಮಸ್ಯೆ ಮಿತಿಮೀರುತ್ತಿದ್ದರೂ ಪಾಲಿಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು, ನಿಜಕ್ಕೂ ಒಎಫ್ಸಿ ಕಿರಿಕಿರಿಯಿಂದ ಸಿಲಿಕಾನ್ ಸಿಟಿ ಪಾದಾಚಾರಿಗಳಿಗೆ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.
ನಗರದ ಫುಟ್ಪಾತ್ ಹಾಗೂ ಮರಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿರುವ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ)ಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ವಿವಿಧ ರೀತಿಯ ಅಂತರ್ಜಾಲ ಸೇವೆ, ದೂರವಾಣಿ ಸಂಪರ್ಕಗಳನ್ನು ನೀಡುವ ಕೇಬಲ್ಗಳನ್ನು ಕಾನೂನು ಬಾಹಿರವಾಗಿ ನಗರಗಳಲ್ಲಿ ಅಳವಡಿಸಲಾಗಿದೆ. ನೆಲದಡಿಯಲ್ಲಿ ಕಾನೂನು ರೀತಿಯಲ್ಲಿ ಅಳವಡಿಸಬೇಕಾದ ಕೇಬಲ್ಗಳನ್ನು ಜನರ, ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವ ರೀತಿ ಅಳವಡಿಸಿರುತ್ತಾರೆ. ರಸ್ತೆಗಳು, ಮರಗಳ ಮೇಲೆ ಕೇಬಲ್ಗಳು ಜೋತು ಬಿದ್ದಿವೆ. ಎಷ್ಟೋ ಸಾರಿ ಬೈಕ್ ಸವಾರರ ಮೇಲೆ ಬಿದ್ದು ಪ್ರಾಣಕ್ಕೆ ಕುತ್ತು ಬಂದಿರುವ ಉದಾಹರಣೆಗಳೂ ಇವೆ. ಇಷ್ಟಾದರೂ ಅನಧಿಕೃತ ಕೇಬಲ್ಗಳನ್ನು ತೆಗೆಯಲು ಬಿಬಿಎಂಪಿ ವಿಫಲವಾಗಿತ್ತು. ಇದೀಗ ನೂತನ ಆಯುಕ್ತರು ಟ್ವೀಟ್ ಮಾಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಮತ್ತು ಅನಧಿಕೃತ ಒಎಫ್ಸಿ ಕೇಬಲ್ಗಳನ್ನು ತೆರವುಗೊಳಿಸಲಾಗಿದೆ.
ವಿಶೇಷ ಕಾರ್ಯಾಚರಣೆ ಸೆಪ್ಟೆಂಬರ್ ಕೊನೆಯವರೆಗೂ ನಡೆಯಲಿದೆ. ಮಹದೇವಪುರ ಹಾಗೂ ಯಲಹಂಕ ವಲಯಗಳಿಗೆ ಈ ಕಾರ್ಯಾಚರಣೆಯನ್ನು ಅಕ್ಟೋಬರ್ವರೆಗೆ ವಿಸ್ತರಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.