ಬೆಂಗಳೂರು: ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡವರು ಗುಣಮುಖರಾಗುತ್ತಿದ್ದಾರೆ. ಜ್ಯೋತಿ ಹಾಗೂ ಮುಖ್ಯ ಅಭಿಯಂತರರಾದ ಶಿವಕುಮಾರ್ ತೀವ್ರವಾಗಿ ಗಾಯಗೊಂಡಿರುವುದರಿಂದ ಮತ್ತು ವಿಷಾನಿಲ ಸೇವಿಸಿರುವುದರಿಂದ ಮತ್ತಷ್ಟು ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಇಂದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣವನ್ನು ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 'ನಗರದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ತಿಳಿಸುತ್ತೇನೆ. ಸ್ವಾತಂತ್ರ್ಯ ಬಂದು ದೇಶ 77ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಬಲಿದಾನಗಳು ನಡೆದಿವೆ. ಇಂದಿಗೂ ಗಡಿಯಲ್ಲಿ ಬಹಳಷ್ಟು ಯೋಧರು ನಮ್ಮನ್ನು ಕಾಯುತ್ತಿದ್ದಾರೆ. ಅವರೆಲ್ಲರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ' ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಚೀಫ್ ಇಂಜಿನಿಯರ್ ಪ್ರಹ್ಲಾದ್, ಬಿಬಿಎಂಪಿಯಲ್ಲಿ ಬೆಂಕಿ ಅವಘಡದ ಬಗ್ಗೆ ಆಂತರಿಕ ತನಿಖೆ ಪ್ರಾರಂಭವಾಗಬೇಕಿದೆ. ಪೊಲೀಸರು ಇನ್ನೂ ಬೆಂಕಿ ಬಿದ್ದ ಲ್ಯಾಬ್ ಕೊಠಡಿಯ ಬೀಗವನ್ನು ನೀಡಿಲ್ಲ. ನಾಳೆ ಸಂಜೆ ಒಳಗಾಗಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಗುರುವಾರ ಅಂತರಿಕ ತನಿಖೆ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಇಬ್ಬರ ಸ್ಥಿತಿ ಗಂಭೀರ: ತನಿಖೆ ಪೂರ್ಣಗೊಳಿಸಿ ಆಗಸ್ಟ್ ತಿಂಗಳ 30ರ ಒಳಗೆ ಆಯುಕ್ತರಿಗೆ ವರದಿ ಕೊಡುತ್ತೇವೆ. ಪೊಲೀಸರು ನನಗೆ ನೋಟಿಸ್ ಕೊಟ್ಟಿಲ್ಲ. ಘಟನೆಯ ಬಗ್ಗೆ ವಿವರಣೆ ಕೇಳಿದ್ದಾರೆ ಅಷ್ಟೇ. ಅವರಿಗೆ ವಿವರಣೆ ಕೊಟ್ಟಿದೇನೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಆಸ್ಪತ್ರೆಯಲ್ಲಿರುವ 9 ಜನರಲ್ಲಿ 5 ಮಂದಿ ಅರೋಗ್ಯವಾಗಿದ್ದಾರೆ. ಉಳಿದ ನಾಲ್ವರ ಚೇತರಿಕೆ ಆಗುತ್ತಿದೆ. ಸದ್ಯ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪ್ರಹ್ಲಾದ್ ತಿಳಿಸಿದರು.

ಪಾಲಿಗೆಯ ಕೇಂದ್ರ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯೋತ್ಸವ: ಈ ಮೊದಲು 77ನೇ ಸ್ವತಂತ್ರ ದಿನಾಚರಣೆ ಹಿನ್ನೆಲೆ ಪಾಲಿಗೆ ಕೇಂದ್ರ ಕಚೇರಿಯಲ್ಲಿ ಅಡಳಿತಧಿಕಾರಿ ರಾಕೇಶ್ ಸಿಂಗ್ ಅವರಿಂದ ಧ್ವಜಾರೋಹಣ ನೆರವೇರಿತು. ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಪಾಲಿಕೆ ಅಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರು, ಬಿಬಿಎಂಪಿಯ ನೌಕರರು ಭಾಗಿಯಾಗಿದ್ದರು. ನೂರಾರು ಶಾಲ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು
'ಪಂಚ ಪ್ರಾಣ ಶಪಥ': ಇದೇ ವೇಳೆ, ಪಾಲಿಕೆ ಕೇಂದ್ರ ಕಚೇರಿ ಮುಂಬಾಗ "ನನ್ನ ಮಣ್ಣು ನನ್ನ ದೇಶ" ಅಭಿಯಾನದ ನಿಮಿತ್ತ ದೇಶಕ್ಕಾಗಿ ಹುತಾತ್ಮ ಯೋಧರ ಗೌರವಾರ್ಥ ಸ್ಥಾಪಿಸಿರುವಂತಹ ಶಿಲಾಫಲಕದ ಮುಂಭಾಗ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಕೈಯಲ್ಲಿ ಮೃತ್ತಿಕೆ(ಮಣ್ಣು) ಹಿಡಿದು 'ಪಂಚ ಪ್ರಾಣ ಶಪಥ' ತೆಗೆದುಕೊಳ್ಳಲಾಯಿತು. ಭಾರತದ ನಿರ್ಮಾಣದಲ್ಲಿ ನಾನು ಪಾಲ್ಗೊಳ್ಳುವುದಾಗಿ, ಯಾವುದೇ ರೀತಿಯ ವಸಾಹತುಶಾಹಿ ಮನಸ್ಥಿತಿಯ ಕುರುಹನ್ನು ತೊಡೆದು ಹಾಕುವುದಾಗಿ ಪ್ರಮಾಣ ಮಾಡುತ್ತೇನೆ ಎಂದು ಪ್ರಮಾಣ ಮಾಡಲಾಯಿತು.

ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳಸುವುದು, ದೇಶದ ಏಕತೆ ಮತ್ತು ಒಗ್ಗಟ್ಟಿಗಾಗಿ ಶ್ರಮಿಸುವುದು, ದೇಶಕ್ಕಾಗಿ ನನ್ನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ಮತ್ತು ತ್ಯಾಗ – ಬಲಿದಾನ ಮಾಡಿದ ದೇಶದ ಕೆಚ್ಚೆದೆಯ ವೀರರಿಗೆ ಗೌರವ ಸಲ್ಲಿಸುವುದಾಗಿ ಹಾಗೂ ದೇಶದ ರಕ್ಷಣೆ ಮತ್ತು ಪ್ರಗತಿಗೆ ಸಮರ್ಪಿಸಿಕೊಳ್ಳುವುದಾಗಿ ಅಡಳಿತಧಿಕಾರಿ, ಆಯುಕ್ತರು, ವಿಶೇಷ ಅಯುಕ್ತರು ಸೇರಿದಂತೆ ನೂರಾರು ನೌಕರರು ಪ್ರತಿಜ್ಞೆ ಮಾಡಿದರು.
ಪಂಚ ಪ್ರಾಣ ಶಪಥ:
- ಅಭಿವೃದ್ಧಿ ಭಾರತದ ಗುರಿ.
- ಯಾವುದೇ ರೀತಿಯ ವಸಾಹತುಶಾಹಿ ಮನಸ್ಥಿತಿಯ ಕುರುಹು ತೊಡೆದು ಹಾಕುವುದು.
- ನಮ್ಮ ಮೂಲದ ಬಗ್ಗೆ ಹೆಮ್ಮೆ ಪಡುವುದು.
- ಏಕತೆ.
- ಪ್ರಜೆಗಳಲ್ಲಿ ಕರ್ತವ್ಯ ಪ್ರತಿಜ್ಞೆ.
ಈ ವೇಳೆ ವಿಶೇಷ ಆಯುಕ್ತ ಜಯರಾಮ್ ರಾಯಪುರ, ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ರೆಡ್ಡಿ ಶಂಕರ ಬಾಬು, ಪ್ರೀತಿ ಗೆಹ್ಲೋಟ್, ಉಪ ಆಯುಕ್ತ ಮಂಜುನಾಥ್ ಸ್ವಾಮಿ, ಸಹಾಯಕ ಆಯುಕ್ತ ಅಜಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: BBMP lab fire: ಬಿಬಿಎಂಪಿ ಲ್ಯಾಬ್‌ನಲ್ಲಿ ಬೆಂಕಿ: ಪೊಲೀಸ್ ನೊಟೀಸ್ಗೆ ಚೀಫ್ ಎಂಜಿನಿಯರ್ ಅಸಮಾಧಾನ