ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ಹಂಚಿಕೆ ಸಮರ್ಪಕವಾಗಿ, ಗೊಂದಲಗಳಿಲ್ಲದೇ ನಡೆಯಲು ಇಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಪಾಲಿಕೆ ವಿಶೇಷ ಆಯುಕ್ತರು, ಆರೋಗ್ಯಾಧಿಕಾರಿಗಳ ಸಭೆ ನಡೆಸಿದರು.
ಎಲ್ಲ ವಲಯಗಳ ವಿಶೇಷ ಆಯುಕ್ತರಿಗೆ ಲಸಿಕೆ ನೇತೃತ್ವ ವಹಿಸಲಾಗಿದೆ. ಅಲ್ಲದೇ ಆರೋಗ್ಯಾಧಿಕಾರಿಗಳದ್ದೂ ಪ್ರಮುಖ ಪಾತ್ರ ಇರುವುದರಿಂದ ಇಂದು ಸಭೆ ನಡೆಸಲಾಯಿತು. ಕೋವಿಡ್ ಪಾಸಿಟಿವ್ ಆದ ಬಳಿಕ ಇದೇ ಮೊದಲ ಬಾರಿಗೆ ಆಯುಕ್ತ ಮಂಜುನಾಥ್ ಪ್ರಸಾದ್ ಸಭೆಗೆ ಹಾಜರಾಗಿದ್ದರು. ಕ್ವಾರಂಟೈನ್ ಅವಧಿ ಮುಗಿಸಲಾಗಿದೆ. ಕ್ವಾರಂಟೈನ್ನಲ್ಲಿ ಇದ್ದಾಗಲೂ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮೀಟಿಂಗ್ ಅಟೆಂಡ್ ಮಾಡಿರುವುದಾಗಿ ಆಯುಕ್ತರು ತಿಳಿಸಿದರು. ಕೋವಿಡ್ ಫಲಾನುಭವಿಗಳ ಸಂಖ್ಯೆ 1.71 ಲಕ್ಷದಿಂದ 1.75 ಕ್ಕೆ ಏರಿಕೆಯಾಗಿದೆ. ಕೋವಿಡ್ ಪೋರ್ಟಲ್ನಲ್ಲಿ ಎಲ್ಲರ ಮಾಹಿತಿ ನೋಂದಣಿ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಆಯುಕ್ತರು, ಆರೋಗ್ಯ ಸಚಿವರು ಹೇಳಿರುವ ಹಾಗೇ, ಸಂಕ್ರಾತಿ ಹಬ್ಬದೊಳಗೆ ವ್ಯಾಕ್ಸಿನ್ ಬರಲಿದೆ. ಈಗಾಗಲೇ 1.75 ಲಕ್ಷ ಆರೋಗ್ಯ ಸಿಬ್ಬಂದಿಯ ಪಟ್ಟಿ ಮಾಡಲಾಗಿದೆ. 1500 ಲಸಿಕಾ ಕೇಂದ್ರಗಳನ್ನ ಗುರುತಿಸಲಾಗಿದೆ ಎಂದರು.
ದೇಶದಲ್ಲಿ ಮೊದಲ ಹಂತದಲ್ಲಿ 1 ಕೋಟಿ ಜನ ಹೆಲ್ತ್ ವಾರಿಯರ್ಸ್ ಇದ್ದು, ಎರಡನೇ ಹಂತದಲ್ಲಿ ಎರಡು ಕೋಟಿ ಫ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ಸಿಗಲಿದೆ. ಮೂರನೇ ಹಂತದಲ್ಲಿ 27 ಕೋಟಿ ಜನರಿಗೆ ಲಸಿಕೆ ಸಿಗಲಿದ್ದು, ಐವತ್ತು ವರ್ಷ ಮೇಲ್ಪಟ್ಟವರು , 50-60 ಹಾಗೂ 60 ವರ್ಷ ಮೇಲ್ಪಟ್ಟವರನ್ನು ವಿಭಾಗ ಮಾಡಿ ಲಸಿಕೆ ನೀಡಲಾಗುತ್ತದೆ. ಅಲ್ಲದೆ 50 ವರ್ಷ ಒಳಗಿನವರಲ್ಲಿ ಅನ್ಯ ಖಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ಕೊಡಲಾಗುತ್ತದೆ.
ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಹೇಗೆ?
ವೋಟರ್ ಲಿಸ್ಟ್ ಮುಖಾಂತರ 50 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಪಟ್ಟಿ ಮಾಡಲಾಗುತ್ತದೆ. ಈ ಲಸಿಕೆ ಪ್ರಕ್ರಿಯೆ ನಿರಂತರವಾಗಿ ನಡೆಯುವ ಹಿನ್ನೆಲೆ ಅಧಿಕಾರಿಗಳಿಗೆ ಲಸಿಕಾ ಕೇಂದ್ರಗಳು ಹಾಗೂ ವ್ಯಾಕ್ಸಿನ್ ಹಂಚಿಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.
1500 ಕೇಂದ್ರಗಳ ಪೈಕಿ, ಐದು ಲೋಕೇಶನ್ಗೆ ಓರ್ವ ಅಧಿಕಾರಿ ನೇಮಕ ಮಾಡಲಾಗುತ್ತದೆ. ಒಟ್ಟು 300 ಜನ ಅಧಿಕಾರಿಗಳನ್ನ ನೇಮಕ ಮಾಡಲಾಗುತ್ತದೆ. ಒಂದು ಲಸಿಕೆ ಕೇಂದ್ರದಲ್ಲಿ ಮೂರು ರೂಂಗಳಿರುತ್ತವೆ, ವೈಟಿಂಗ್ ರೂಂ ಬಂದ ಫಲಾನುಭವಿಗಳ ರಿಜಿಸ್ಟರ್ಗೆ ಬೇರೆ ಇಲಾಖೆಗಳ ಸಿಬ್ಬಂದಿ ಕೆಲಸ ಮಾಡುತ್ತಾರೆ. ವ್ಯಾಕ್ಸಿನೇಷನ್ ಹಾಗೂ ಅಬ್ಸರ್ವೇಷನ್ ರೂಂ ಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನೇ ನೇಮಕ ಮಾಡಬೇಕಾಗುತ್ತದೆ. ಬಿಬಿಎಂಪಿಯ ಬೇರೆ - ಬೇರೆ ಇಲಾಖೆಗಳ ಎಲ್ಲ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತದೆ. ಸೌಲಭ್ಯಗಳು, ಕೇಂದ್ರಗಳ ಗುರುತಿಸುವಿಕೆ, ಹಾಗೂ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಲಸಿಕೆ:
ಮೊದಲನೇ ಹಂತದಲ್ಲಿ ಬಿಬಿಎಂಪಿಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳನ್ನು ಬಳಕೆ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲೂ ನೂರಕ್ಕಿಂತ ಹೆಚ್ಚು ಸಿಬ್ಬಂದಿ ವ್ಯಾಕ್ಸಿನ್ ಪಡೆಯುವವರು ಇದ್ದರೆ, ಒಂದೇ ಕಡೆ ಐದಕ್ಕಿಂತ ಹೆಚ್ಚು ಲಸಿಕೆ ಕೇಂದ್ರ ತೆರೆಯಬಹುದು.
ವ್ಯಾಕ್ಸಿನ್ ಕೇಂದ್ರಗಳು ಹೇಗಿರಲಿವೆ?
ಪ್ರತೀ 1,500 ವ್ಯಾಕ್ಸಿನ್ ಕೇಂದ್ರಗಳಲ್ಲಿ ವೈ - ಫೈ ಇರಲಿದೆ. ಕೋವಿನ್ ಪೋರ್ಟಲ್ನಲ್ಲಿ ದಾಖಲಾದ ಮಾಹಿತಿಯೂ, ಫಲಾನುಭವಿಗಳ ಮಾಹಿತಿಯನ್ನೂ ಪರಿಶೀಲನೆ ಮಾಡಲಾಗುತ್ತೆ. ಇನ್ನು ಅಬ್ಸರ್ವೇಶನ್ ರೂಂ ನಲ್ಲಿ ವ್ಯಾಕ್ಸಿನ್ ಪಡೆದ ಬಳಿಕ ಅಡ್ಡ ಪರಿಣಾಮ ಆದರೆ ಮುಂಜಾಗ್ರತಾ ಕ್ರಮವಾಗಿ ಒಂದು ಕಿಟ್ ಸಿದ್ಧ ಮಾಡಿಡಲಾಗುತ್ತದೆ. ಪ್ರತೀ ಕೇಂದ್ರಕ್ಕೂ ಆ್ಯಂಬುಲೆನ್ಸ್ ಟ್ಯಾಗ್ ಮಾಡಿ ಇಡಲಾಗಿರುತ್ತದೆ. ಅಲ್ಲದೆ ಮೊದಲೇ ನಿರ್ಧರಿಸಿದ ಆಸ್ಪತ್ರೆಯನ್ನೂ ಟ್ಯಾಗ್ ಮಾಡಿ ಇಡಲಾಗುತ್ತದೆ. ಕೋವಿಡ್ ವ್ಯಾಕ್ಸಿನ್ ಶೇ.100 ರಷ್ಟು ಸುರಕ್ಷಿತವಾಗಿದೆ. ಯಾರಿಗಾದರೂ ಅನಾರೋಗ್ಯ ಕಂಡು ಬಂದರ ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಯಾವುದೇ ಅಡ್ಡಪರಿಣಾಮದ ಸಾಧ್ಯತೆ ಇರುವುದಿಲ್ಲ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ರು.
ಇದನ್ನೂ ಓದಿ:ಸಂಕ್ರಾಂತಿಗೆ ಕೇಂದ್ರದ ಭರ್ಜರಿ ಗಿಫ್ಟ್: ಜ.16ರಿಂದ ದೇಶಾದ್ಯಂತ ಕೊರೊನಾ ಲಸಿಕೆ ಹಂಚಿಕೆ