ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆರೋಗ್ಯ ವಿಭಾಗದ ಅಧಿಕಾರಿಗಳ ಜೊತೆ ವಿಶೇಷ ಆಯುಕ್ತರು ಹಾಗೂ ಸಂಸದ ತೇಜಸ್ವಿ ಸೂರ್ಯ ಸಭೆ ನಡೆಸಿದರು. ಈ ವೇಳೆ ವಿದೇಶದಿಂದ ನಗರಕ್ಕೆ ಬಂದಿರುವವರಲ್ಲಿ 114 ಮಂದಿ ನಾಪತ್ತೆಯಾಗಿರುವ ವಿಚಾರದ ಕುರಿತು ಹಾಗೂ ಪತ್ತೆ ಹಚ್ಚುವ ಮಾರ್ಗಗಳ ಕುರಿತು ಚರ್ಚೆ ನಡೆಯಿತು.
ಬಳಿಕ ಮಾತನಾಡಿದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ವಿದೇಶಿ ಪ್ರಯಾಣಿಕರ ಪಾಸ್ಪೋರ್ಟ್ನಲ್ಲಿ ನೀಡಿರುವ ವಿಳಾಸ ಹೊಂದಾಣಿಕೆಯಾಗುತ್ತಿಲ್ಲ. ಎಸ್ಎಂಎಸ್, ಫೋನ್, ವಾಟ್ಸ್ ಆ್ಯಪ್ಗೂ ಸಿಗುತ್ತಿಲ್ಲ. ಕೊನೆಯದಾಗಿ ಪೊಲೀಸರಿಗೆ ಪ್ರಕರಣವನ್ನು ವರ್ಗಾಯಿಸಿದ್ದೇವೆ. ಪ್ರತೀ ವಲಯಕ್ಕೂ ವಿಶೇಷ ತಂಡಗಳನ್ನು ರಚಿಸಿ ಈವರೆಗೂ ಹುಡುಕಾಟ ನಡೆಯುತ್ತಿದೆ. ಬ್ರಿಟನ್ ಪ್ರಯಾಣಿಕರಲ್ಲಿ 382 ಜನರ ಪಟ್ಟಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು. 79 ಜನರ ಪಾಸ್ಪೋರ್ಟ್ ತಪಾಸಣೆ ಮಾಡಿದಾಗ ಬೆಂಗಳೂರಲ್ಲಿ ವಿಳಾಸ ಇಲ್ಲ ಎಂದು ಖಚಿತವಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಮಹದೇವಪುರ ಸುತ್ತಮುತ್ತ ವಾಸದ ಅಡ್ರೆಸ್ಗಳು ಸಿಗುತ್ತಿಲ್ಲ. ಅತಿ ಹೆಚ್ಚು ಜನ ಐಟಿ ಕೆಲಸದವರು ಮಹದೇವಪುರದಲ್ಲೇ ವಾಸ ಇರುವುದರಿದ ಅಲ್ಲಿನ ವಿಳಾಸಗಳು ಸಿಗುತ್ತಿಲ್ಲ. ಪೊಲೀಸ್ ಇಲಾಖೆಯೂ ವಲಯವಾರು ತಂಡ ರಚನೆ ಮಾಡಿದೆ. ನಾಳೆ ಪೊಲೀಸ್ ಇಲಾಖೆ ಸ್ಪಷ್ಟ ಪಟ್ಟಿ ಕೊಡಬಹುದು ಎಂಬ ನಿರೀಕ್ಷೆ ಇದೆ ಎಂದರು.
ಇನ್ನು ಸಚಿವರು 75 ಜನ ಕಣ್ಮರೆ ಎಂದು ಹೇಳುತ್ತಿದ್ದಾರೆ. ಬಿಬಿಎಂಪಿ 114 ಜನ ಮಿಸ್ಸಿಂಗ್ ಎನ್ನುತ್ತಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟ ರಾಜೇಂದ್ರ ಚೋಳನ್, ಎರಡು ಪಟ್ಟಿ ಬಂದಿದೆ. ಹಾಗಾಗಿ ಗೊಂದಲ ಅಗಿದೆ. ಮೊದಲ ಪಟ್ಟಿ ಬಂದಾಗ 75 ಮಂದಿ ಎಂದು ಐಟಿ ವಿಭಾಗದಿಂದ ಮಾಹಿತಿ ಹೋಗಿದೆ. ಆದ್ರೆ ಪೂರ್ಣ ಮಾಹಿತಿ ಪಡೆದಾಗ 114 ಅಂತ ಆಗಿದೆ. ಪಾಲಿಕೆ ಅಧಿಕಾರಿಗಳು ವೆರಿಫಿಕೇಶನ್ ಮಾಡಿದಾಗ 79 ಜನರ ಮಾಹಿತಿ ನಾಟ್ ರೀಚಬಲ್ ಎಂದು ಒಂದು ಪಟ್ಟಿ ನೀಡಿದೆ. ಆದ್ರೆ ಎಲ್ಲಾ ಪಟ್ಟಿಗಳು ಪೊಲೀಸರಿಗೆ ತಲುಪಿಸಿದ್ದು, ಮುಂದಿನ ಒಂದು ದಿನದಲ್ಲಿ ಪೊಲೀಸರು ಅಂಕಿ-ಅಂಶ ಕೊಡಲಿದ್ದಾರೆ ಎಂದರು.