ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ನಡುವೆ ಈ ಬಾರಿ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಆಚರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಜ.26ರಂದು ನಗರದ ಮಾಣಿಕ್ ಶಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಿದ್ಧತೆಗಳ ಕುರಿತು ಬೆಂಗಳೂರು ಜಿಲ್ಲಾಧಿಕಾರಿ ಶಿವಮೂರ್ತಿ, ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಸಮಾರಂಭಕ್ಕೆ ಬರುವ ಅತಿಥಿಗಳಿಗಾಗಿ 500 ಆಸನಗಳನ್ನು ಕಾಯ್ದಿರಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ರಾಜ್ಯಪಾಲರು ಬೆಳಗ್ಗೆ 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮಾರಂಭ ಅವಧಿ 40 ನಿಮಿಷಗಳ ಮಾತ್ರ ಇರಲಿದೆ ಎಂದು ಮಾಹಿತಿ ನೀಡಿದರು.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಮಾಣಿಕ್ ಶಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ಪತ್ರ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು.. ಸಮಾರಂಭಕ್ಕೆ 8:40ರ ಒಳಗೆ ಬಂದವರಿಗೆ ಮಾತ್ರ ಪ್ರವೇಶ. ಮುಂಜಾಗ್ರತ ಕ್ರಮವಾಗಿ ಏಳು ಡಿಸಿಪಿಗಳು, 16 ಎಸಿಪಿ ಸೇರಿದಂತೆ 1000 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಲಾಗುತ್ತಿದೆ. ಅದೇ ರೀತಿ 12 ಕೆಎಸ್ಆರ್ಪಿ, 9 ಸಿಎಆರ್ ತುಕಡಿ, ಒಂದು ಗರುಡ ಪಡೆ ಕಣ್ಗಾವಲು ಇರಿಸಲಿವೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ತಮ್ಮೊಂದಿಗೆ ಅನಗತ್ಯವಾದ ಲಗೇಜು ಹಾಗೂ ಇತರ ವಸ್ತುಗಳನ್ನು ತರುವಂತಿಲ್ಲ ಎಂದು ಸೂಚಿಸಲಾಗಿದೆ. ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಹಾಗೂ ವ್ಯಕ್ತಿಗಳು ಕಂಡುಬಂದಲ್ಲಿ ವಶಕ್ಕೆ ಪಡೆಯಲಾಗುವುದು. ಇನ್ನು ಮೈದಾನಕ್ಕೆ ಸಿಗರೇಟ್, ಬೆಂಕಿಪೊಟ್ಟಣ, ಕರಪತ್ರಗಳು, ಹರಿತವಾದ ವಸ್ತುಗಳು ಚಾಕು-ಚೂರಿ, ಮದ್ಯದ ಬಾಟಲಿಗಳು, ಬಾವುಟ, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ತರದಂತೆ ನಿಷೇಧಿಸಲಾಗಿದೆ ಎಂದು ಕಮಲ್ ಪಂತ್ ತಿಳಿಸಿದ್ರು.
ಇದನ್ನೂ ಓದಿ: ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರುಪಾಲಾಗಿದ್ದ ಮತ್ತೊಬ್ಬ ಯುವಕನ ಶವ ಪತ್ತೆ