ಬೆಂಗಳೂರು: ನಗರದಲ್ಲಿ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಬಿಬಿಎಂಪಿ ಸಜ್ಜುಗೊಂಡಿದೆ. ಈಗಾಗಲೇ ನಿಗದಿಯಾಗಿರುವ ಲಸಿಕಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಯಾ ವಲಯದ ವಿಶೇಷ ಆಯುಕ್ತರು ದಿನನಿತ್ಯ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಲಸಿಕೆ ವಿಚಾರವಾಗಿ ಈಗಾಗಲೇ ಚರ್ಚೆ, ಸಭೆಗಳು ನಡೆದಿವೆ. ಲಸಿಕಾ ಕೇಂದ್ರಗಳಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆಯೂ ಗಮನ ವಹಿಸಲಾಗುವುದು. ಇದನ್ನು ಹೊರತುಪಡಿಸಿ ಬೇರೆ ಆಸ್ಪತ್ರೆಗಳು, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂರು ಕೋಣೆಗಳು ಇರದಿದ್ದರೂ ನಡೆಯುತ್ತದೆ. ಆದರೆ ಐದು ಸಿಬ್ಬಂದಿ ಇರುವುದು ಕಡ್ಡಾಯ, ಜೊತೆಗೆ ವೈ-ಫೈ ಕನೆಕ್ಟಿವಿಟಿ, ಆ್ಯಂಬುಲೆನ್ಸ್ ಸೇವೆ ಇರಲಿದೆ. ಐದೈದು ಕೇಂದ್ರಗಳಿಗೆ ಒಬ್ಬರು ಹಿರಿಯ ಅಧಿಕಾರಿಯನ್ನು ಸೆಕ್ಟರ್ ಆಫೀಸರ್ ಆಗಿ ನೇಮಕ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಫಲಾನುಭವಿಗಳು ನೂರಕ್ಕಿಂತ ಹೆಚ್ಚು ಜನ ಇದ್ದರೆ, ಅವರ ಸಂಖ್ಯೆಗೆ ಅನುಗುಣವಾಗಿ ಲಸಿಕಾ ಕೇಂದ್ರ ನಿರ್ಮಾಣ ಮಾಡಿ, ಒಬ್ಬರು ಸೂಪರ್ ವೈಸರ್ ಅನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದ್ರು.
ದಾಸಪ್ಪ ಆಸ್ಪತ್ರೆಯಿಂದ 3 ಶೀತಲ ವ್ಯವಸ್ಥೆ ಇರುವ ವಾಹನಗಳ ಮೂಲಕ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್ ರವಾನೆಯಾಗಲಿದೆ. ಅಲ್ಲಿಂದ ಒಂದೊಂದು ಲಸಿಕಾ ಕೇಂದ್ರಕ್ಕೂ ಲಸಿಕೆ ತಲುಪಲಿದೆ. ಇಂದಿನಿಂದ ಪ್ರತಿದಿನ ವಿಶೇಷ ಆಯುಕ್ತರು ತಮ್ಮ- ತಮ್ಮ ವಲಯದ ಲಸಿಕಾ ಕೇಂದ್ರಗಳಿಗೆ ಭೇಟಿ ಕೊಟ್ಟು, ಸಿದ್ಧತೆ ಬಗ್ಗೆ ಪರಿಶೀಲಿಸಲಿದ್ದಾರೆ, ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್ ಪ್ರಸಾದ್ ಹೇಳಿದ್ರು.
ಇದನ್ನೂ ಓದಿ:ಪದವಿ, ಸ್ನಾತಕೋತ್ತರ ಕೋರ್ಸ್ಗಳಿಗೆ ಜ.15 ರಿಂದ ಆಫ್ಲೈನ್ ತರಗತಿ ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ