ಬೆಂಗಳೂರು: ರಾಜ್ಯ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ, ಮಾಸ್ಕ್ ವಿಚಾರವಾಗಿ ಇದ್ದ ಗೊಂದಲಕ್ಕೆ ತೆರೆ ಎಳೆದಿದೆ.
ಕಾರು ಚಾಲಕ ಒಬ್ಬನೇ ಇದ್ದರೆ ಕಾರು ಕಿಟಕಿಗಳನ್ನು ಬಂದ್ ಮಾಡಿಕೊಂಡು ಕಾರು ಚಲಾಯಿಸುತ್ತಿದ್ದರೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಯಾವುದೇ ದಂಡಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೆಯೇ ದ್ವಿಚಕ್ರ ವಾಹನ ಸವಾರರು ಒಬ್ಬರೇ ಹೋಗುತ್ತಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದ್ದು, ಈ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ವಾಹನ ಸವಾರರಿಗೆ ಮಾಸ್ಕ್ ಕಡ್ಡಾಯದ ಬಗ್ಗೆ ಗೊಂದಲ ಉಂಟಾಗಿದ್ದರಿಂದ ಆಯುಕ್ತರಾದ ಮಂಜುನಾಥ್ ಪ್ರಸಾದ್ ಸರ್ಕಾರದ ಆರೋಗ್ಯ ಇಲಾಖೆಗೆ ಪತ್ರ ಬರೆದು ಸ್ಪಷ್ಟೀಕರಣ ಕೊಡುವಂತೆ ಕೇಳಿದ್ದರು. ತಾಂತ್ರಿಕ ಸಲಹಾ ಸಮಿತಿ ನೀಡಿದ ಸ್ಪಷ್ಟೀಕರಣದಂತೆ ಪರಿಷ್ಕೃತ ಆದೇಶವನ್ನು ಆಯುಕ್ತರು ಇಂದಿನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.