ಬೆಂಗಳೂರು: ನಗರದಲ್ಲಿ ಕೋವಿಡ್ ಹರಡುವಿಕೆ ಪ್ರತಿನಿತ್ಯ ಏಳು ಸಾವಿರದ ಗಡಿ ಮೀರುತ್ತಿದೆ. ಈ ಹಿನ್ನೆಲೆ ಆಸ್ಪತ್ರೆಗಳ ಬೆಡ್ಗಳಿಗೂ ಬೇಡಿಕೆ ಹೆಚ್ಚಿದ್ದು, ಪಾಲಿಕೆ ಅಧಿಕಾರಿಗಳ ಮೇಲೂ ಒತ್ತಡ ಹೆಚ್ಚಾಗಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದು ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿದರು.
ಸಭೆ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಕೊರೊನಾ ಪಾಸಿಟಿವ್ ಆಗಿರುವ ಶೇ.80 ರಷ್ಟು ಜನರಿಗೆ ಔಷಧದ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಇದ್ದು ಗುಣಮುಖರಾಗಬಹುದು. ಕೇವಲ 10 -15 ಶೇಕಡಾ ಜನರಿಗೆ ಮಾತ್ರ ಆಸ್ಪತ್ರೆ ಅಗತ್ಯ ಇರುತ್ತದೆ. ಸೋಂಕಿನ ಲಕ್ಷಣಗಳಿದ್ರೆ ಮಾತ್ರ ಆಸ್ಪತ್ರೆ ಸೇರುವ ಅಗತ್ಯ ಇರುತ್ತದೆ. ಹೆಲ್ಪ್ ಲೈನ್ 108, ಆಪ್ತಮಿತ್ರದಲ್ಲಿ 14410 ಹಾಗೂ ಬೆಂಗಳೂರಿಗಾಗಿಯೇ 1912 ಸಹಾಯವಾಣಿ ಇದ್ದು, ಇದನ್ನು ಸಂಪರ್ಕಿಸಬೇಕು. ಬೆಂಗಳೂರಿನ ಸಹಾಯವಾಣಿ ಇಂದು ಸಂಜೆಯೊಳಗೆ ಕಾರ್ಯಾರಂಭಿಸಲಿದೆ ಎಂದರು.
ರಾಜ್ಯ ತಾಂತ್ರಿಕ ಸಲಹಾ ಸಮಿತಿ ಅಂದಾಜಿಸಿರುವ ಪ್ರಕಾರ, ನಗರದ ಕೋವಿಡ್ ಪ್ರಕರಣಗಳ ಸಂಖ್ಯೆ ದಿನವೊಂದಕ್ಕೆ ಹತ್ತು ಸಾವಿರವೂ ದಾಟಬಹುದು ಎಂದಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಿ ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ಅಬ್ಬರ.. ಒಂದೇ ಬೀದಿಯ 8 ಮನೆಗಳಲ್ಲಿ ಸೋಂಕು
ಕೋವಿಡ್ ಸೋಂಕು ಪರೀಕ್ಷೆ ವ್ಯವಸ್ಥೆಯನ್ನು ಸುಧಾರಿಸಿ, ಒಂದು ಲಕ್ಷಕ್ಕೆ ಏರಿಕೆ ಮಾಡಬೇಕು. ಲಸಿಕೆ ವಿತರಣೆಯನ್ನು 35 ಸಾವಿರದಿಂದ 70 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಬೆಡ್ಗಳು ಸಿಗಬೇಕಿವೆ. ಇದರ ಪರಿಶೀಲನಾ ಸಭೆಯನ್ನೂ ಮಾಡಲಾಗಿದೆ. ಇದಲ್ಲದೆ ಎಂಟೂ ವಲಯದ ಅಧಿಕಾರಿಗಳ ಜೊತೆಗೂ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಕೇರ್ ಸೆಂಟರ್ಗಳನ್ನು ಪ್ರತಿ ವಲಯಗಳಲ್ಲಿ ಎರಡು-ಮೂರು ಕೇಂದ್ರಗಳ ಆರಂಭದ ಬಗ್ಗೆಯೂ ಇಂದು ಚರ್ಚೆ ನಡೆಯಲಿದೆ. ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ. ಹೀಗಾಗಿ ಜನರು ತಮ್ಮ ಓಡಾಟ ಕಡಿಮೆ ಮಾಡಬೇಕು. ಇದರಿಂದ ಕೋವಿಡ್ ಸಂಖ್ಯೆ ಹತೋಟಿಗೆ ಬರಲು ಸಾಧ್ಯ ಎಂದರು.
ಇದನ್ನೂ ಓದಿ: 'ರಾಜ್ಯದ 1 ಕೋಟಿ ಕುಟುಂಬಗಳಿಗೆ ತಲಾ ₹10 ಸಾವಿರ ಕೊಡಿ.. ಆಮೇಲೆ ಲಾಕ್‌ಡೌನ್ ಮಾಡಿ..'
ಆಸ್ಪತ್ರೆಗಳಲ್ಲಿ ಬೆಡ್ ಅಭಾವ: ಸರ್ಕಾರದ ಆಸ್ಪತ್ರೆಗಳಲ್ಲಿ ಕೋವಿಡ್ಗೆ ಮೀಸಲಿಟ್ಟಿರುವ ಬೆಡ್ ಭರ್ತಿಯಾಗಿ, ಅಭಾವ ಆಗ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಲು ಸರ್ಕಾರ ಆದೇಶ ಮಾಡಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ ಮೂಲಕ ಖಾಸಗಿ ಆಸ್ಪತ್ರೆಗಳ ಬೆಡ್ ನಿಯೋಜಿಸಲಾಗುವುದು. ಇದರ ಖರ್ಚನ್ನು ಸರ್ಕಾರವೇ ಭರಿಸುತ್ತದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ನಡೆಸಲಾಗುತ್ತದೆ. ಬಹಳ ಕಡಿಮೆ ವಯಸ್ಸಿನವರಿಗೂ ಹೆಚ್ಚೆಚ್ಚು ಕೋವಿಡ್ ಸೋಂಕು ಹರಡುತ್ತಿದೆ. ಯಾರದ್ದೇ ಆರೋಗ್ಯ ಪರಿಸ್ಥಿತಿಯೂ ಗಂಭೀರ ಪರಿಸ್ಥಿತಿಗೆ ತಿರುಗಬಹುದು. ಹಾಗಾಗಿ ಯಾರೂ ರಿಸ್ಕ್ ತೆಗೆದುಕೊಳ್ಳಬಾರದು. ನಿಯಮ ಮೀರಬಾರದು ಎಂದರು.
ಲಸಿಕೆ ಅಭಾವ: ಲಸಿಕೆಯನ್ನು ಡಬಲ್ ಮಾಡುವ ಗುರಿ ಇದೆ. ನಗರಕ್ಕೆ ನಿನ್ನೆ ಮೂರು ಲಕ್ಷ ಲಸಿಕೆ ಬರಬೇಕಾಗಿತ್ತು. ಆದರೆ ಎರಡು ಲಕ್ಷ ಮಾತ್ರ ಬಂದಿದೆ. ಹೀಗಾಗಿ ಕೆಲವು ಕಡೆ ಲಸಿಕೆ ಅಭಾವ ಇದ್ದು, ಇದನ್ನು ಸರಿಪಡಿಸುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ಆದರೆ ಲಸಿಕೆ ಪಡೆದ ಕೂಡಲೇ ಎರಡನೇ ಅಲೆಯ ಕೋವಿಡ್ ನಿಂದ ಪೂರ್ಣ ರಕ್ಷಣೆ ಎಂದು ಹೇಳಲಾಗುವುದಿಲ್ಲ. ಜನರು ತಮ್ಮ ರಕ್ಷಣೆಯಲ್ಲಿ ತಾವಿರಬೇಕು ಎಂದು ಸಲಹೆ ನೀಡಿದರು.