ಬೆಂಗಳೂರು: "ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘನೆ ಆಗದಂತೆ ನಾವು ಕ್ರಮ ವಹಿಸುತ್ತಿದ್ದೇವೆ. ಈಗಾಗಲೇ ವಲಯವಾರು ಬ್ಯಾನರ್, ಫ್ಲೆಕ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗುತ್ತಿದೆ. ಅಧಿಕಾರಿಗಳು ಕೂಡ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು" ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ರಾಜಕಾಲುವೆ ಹೂಳೆತ್ತುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಿರಂತರವಾಗಿ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕಿದೆ. ನಗರದಲ್ಲಿ 90 ಕಿ.ಮೀ ಉದ್ದದ ರಾಜಕಾಲುವೆ ಇದೆ. ಇದರಲ್ಲಿ ಶೇ. 50ರಷ್ಟು ಲೈನ್ಡ್ ಕಾಲುವೆ ಇದ್ದು ಇದಕ್ಕಾಗಿ ಟೆಂಡರ್ ಕರೆದು ಆಯಾ ವಿಧಾನಸಭಾ ಕ್ಷೇತ್ರಗಳ ಪ್ರಕಾರ ಕಾಂಟ್ರಾಕ್ಟರ್ಗಳನ್ನು ನೇಮಿಸಲಾಗಿದೆ. ಈ ಹಿಂದೆ ಟೆಂಡರ್ ಕರೆದು ಒಬ್ಬರಿಗೆ ಮಾತ್ರ ಕಾಂಟ್ರಾಕ್ಟ್ ನೀಡಲಾಗಿತ್ತು. ಇದೀಗ ವಿಭಾಗವಾರು ಪ್ರಕಾರ ಟೆಂಡರ್ ಕರೆದು ಗುತ್ತಿಗೆ ನೀಡಿ ಅಂತಿಮಗೊಳಿಸಲಾಗಿದೆ."
"ಟೆಂಡರ್ ಪಡೆದಿರುವವರು ಮೂರು ವರ್ಷಗಳವರೆಗೂ ರಾಜಕಾಲುವೆ ಸ್ವಚ್ಛತೆ ಕಾರ್ಯವನ್ನು ನೋಡಿಕೊಳ್ಳಲಿದ್ದಾರೆ. ಮಳೆಗಾಲ ಸಮಯದಲ್ಲೂ ರಾಜಕಾಲುವೆ ಸ್ವಚ್ಛತೆ ಕಾರ್ಯ ನಡೆಯಲಿದ್ದು ಅದರ ನಂತರವೂ ಕಾರ್ಯ ಮುಂದುವರೆಸಲಿದ್ದಾರೆ ಎಂದರು. ಅನ್ಲೈನ್ಡ್ ಕಾಲುವೆ ಪ್ರದೇಶಗಳಲ್ಲಿ ಈ ಹಿಂದೆ ಒಂದು ಬಾರಿ ಮಾತ್ರ ಸ್ವಚ್ಛತೆ ಮಾಡಲಾಗಿತ್ತು. ಇದೀಗ ಅನ್ಲೈನ್ಡ್ ಇದ್ದಂತಹ ಪ್ರದೇಶಗಳಲ್ಲಿ ಲೈನ್ಡ್ ಮಾಡಲಾಗುತ್ತಿದ್ದು ಪ್ರಸ್ತುತ ಗುತ್ತಿಗೆ ಪಡೆದಿರವುವವರೇ ಅಲ್ಲಿಯ ಸ್ವಚ್ಛತೆ ಕಾರ್ಯದ ಬಗ್ಗೆ ನೋಡಿಕೊಳ್ಳಬೇಕಿದೆ" ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಇದನ್ನೂ ಓದಿ: ಮತಗಟ್ಟೆ ಮೂಲಸೌಲಭ್ಯಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ
ಮಾರ್ಚ್‌ನಲ್ಲಿ ಬಜೆಟ್: "ನಗರದಲ್ಲಿ ಭೀಕರ ಪ್ರವಾಹ, ಹದಗೆಟ್ಟ ರಸ್ತೆಗಳು ಮತ್ತು ನಾಗರಿಕ ಸೌಕರ್ಯಗಳ ಬಗ್ಗೆ ದೂರುಗಳು, ಸಂಚಾರ ದಟ್ಟಣೆ ಸಮಸ್ಯೆ ಹಾಗು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದೆ" ಎಂದು ಅವರು ಮಾಹಿತಿ ನೀಡಿದರು.
ಕಾರ್ಪೋರೇಟರ್‌ಗಳಿಲ್ಲದೇ 3ನೇ ಬಾರಿ ಬಜೆಟ್: ಕಾರ್ಪೋರೇಟರ್‌ಗಳಿಲ್ಲದೇ ಮೂರನೇ ಬಾರಿ ಅಧಿಕಾರಿಗಳಿಂದ ಬಜೆಟ್ ಮಂಡನೆಯಾಗುತ್ತಿದೆ. ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಜೊತೆಗೆ ಸಭೆ ನಡೆಸುತ್ತಿದ್ದಾರೆ. ಶೀಘ್ರವೇ ಕರಡು ಸಲ್ಲಿಕೆಯಾಗಲಿದೆ. ಬಜೆಟ್ ಗಾತ್ರ 10 ಸಾವಿರ ಕೋಟಿ ಇರಲಿದೆ. ರಾಜ್ಯ ಬಜೆಟ್ ಅನುದಾನ ಆಧರಿಸಿ ಪಾಲಿಕೆ ಬಜೆಟ್ ಮಂಡಿಸಲಾಗುತ್ತಿದೆ. ರಾಜಕಾಲುವೆ ಹೂಳೆತ್ತುವುದು, ಹೊಸ ನೀರುಗಾಲುವೆ, ಕಸ ನಿರ್ವಹಣೆ, ಬೀದಿ ದೀಪ ಸೇರಿದಂತೆ ಹೊಸ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಕಳೆದ ಬಾರಿ ವೆಬ್ ಸೈಟ್‌ನಲ್ಲಿ ಬಜೆಟ್ ಮಂಡನೆ ಮಾಡಲಾಗಿತ್ತು. ಆದರೆ ಈ ಬಾರಿ ತುಷಾರ್ ಗಿರಿನಾಥ್ ಮತ್ತು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚಲು 7 ಸಾವಿರ ಕೋಟಿ ಖರ್ಚು ಎಂಬುದು ಸುಳ್ಳು ಆರೋಪ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್..