ಬೆಂಗಳೂರು: 2020ರ ಜನವರಿ ತಿಂಗಳಿನಿಂದ ಜುಲೈ ತಿಂಗಳ ವರೆಗೆ 35,307 ಜನ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿಯ ಸಾಂಖ್ಯಿಕ ವಿಭಾಗ ತಿಳಿಸಿದೆ.
ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯಲ್ಲಿ ಬೆಂಗಳೂರು ನಗರದಲ್ಲಿ ಜನವರಿಯಿಂದ - ಜುಲೈ ವರೆಗೆ 49,135 ಜನರ ಸಾವಿನ ಪ್ರಕರಣ ವರದಿಯಾಗಿದೆ ಎಂದು ಹೇಳಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 37,001 ಸಾವು ಸಂಭವಿಸಿದೆ. ಒಟ್ಟಿನಲ್ಲಿ ಈ ವರ್ಷ 12,134 ಸಾವು ಪ್ರಕರಣ ಹೆಚ್ಚಾಗಿದೆ ಎಂದು ಉಲ್ಲೇಖಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ, ಕಳೆದ ವರ್ಷ ಜನವರಿಯಿಂದ - ಜುಲೈ ವರೆಗೆ 37,004, ಈ ವರ್ಷ ಇದೇ ಅವಧಿಯಲ್ಲಿ 35,307 ಸಾವಿನ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಶಾಸಕ ಹೆಚ್.ಕೆ. ಪಾಟೀಲ್ ನೀಡಿರುವ ಅಂಕಿ-ಅಂಶಗಳು ಯಾವ ಮೂಲಗಳಿಂದ ಸಿಕ್ಕಿವೆ ಎಂಬ ಮಾಹಿತಿ ಇಲ್ಲ.
ಸದ್ಯ ಪಾಲಿಕೆ ನೀಡಿರುವ ಅಂಕಿ-ಅಂಶ ರಾಜ್ಯ ಸರ್ಕಾರದ ಜನನ ಮತ್ತು ಮರಣ ಮುಖ್ಯನೋಂದಣಾಧಿಕಾರಿಯ ಕಚೇರಿಯ ಅಧಿಕೃತ ಜಾಲತಾಣದ ಮಾಹಿತಿಯಾಗಿದ್ದು ಸತ್ಯತೆಯಿಂದ ಕೂಡಿದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.
ಬಿಬಿಎಂಪಿ ನೀಡಿರುವ ಮರಣ ಪ್ರಕರಣಗಳ ಮಾಹಿತಿ
ತಿಂಗಳು | 2019 | 2020 |
ಜನವರಿ | 5,168 | 5,983 |
ಫೆಬ್ರವರಿ | 5,766 | 5,454 |
ಮಾರ್ಚ್ | 5,400 | 4,716 |
ಏಪ್ರಿಲ್ | 4,806 | 3,327 |
ಮೇ | 4,687 | 4,881 |
ಜೂನ್ | 4,687 | 4,881 |
ಜುಲೈ | 5,278 | 6,477 |
ಒಟ್ಟು | 37,004 | 35,307 |
ಕೋವಿಡ್ ವೈರಸ್ ತಗುಲಿ ಸತ್ತವರನ್ನು ಹೊರತುಪಡಿಸಿಯೂ ಬೆಂಗಳೂರಿನಲ್ಲಿ ಮಾಮೂಲಿಗಿಂತ ಹತ್ತು ಸಾವಿರ ಜನರು ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಈ ಸಾವುಗಳು ಹೇಗಾದವು ಎಂಬ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ಮಾಹಿತಿ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಒತ್ತಾಯಿಸಿದ್ದರು.