ಬೆಂಗಳೂರು:ಆಡಳಿತಾಧಿಕಾರಿ ರಾಕೇಶ್‍ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಸಮ್ಮುಖದಲ್ಲಿಂದು ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಪುರಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದರು. ಪಾಲಿಕೆಯು ವೆಚ್ಚಗಳಲ್ಲಿ ಸಮನ್ವಯತೆ ಸಾಧಿಸಿ ಆರ್ಥಿಕ ಶಿಸ್ತು, ಸ್ವಾವಲಂಬನೆ, ಆತ್ಮನಿರ್ಭರತೆಗೆ ಈ ಬಾರಿ ಒತ್ತು ನೀಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ 4,093.86 ಕೋಟಿ ರೂ ಹಾಗೂ ಪ್ರಸಕ್ತ ವರ್ಷದ ಪಾಲಿಕೆ ಆದಾಯ 7,070.11 ಕೋಟಿ ರೂ.ಸೇರಿದಂತೆ ಒಟ್ಟು 11,163.97 ಕೋಟಿ ರೂ ಗಳಾಗಿದೆ. ಈ ಬಾರಿ 6.14 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ. 2023-24 ನೇ ಸಾಲಿನಲ್ಲಿ ಆಸ್ತಿ ತೆರಿಗೆ ಬಾಬತ್ತಿನಲ್ಲಿ ಸೆಸ್ ಸೇರಿದಂತೆ ಒಟ್ಟು 4,790 ಕೋಟಿ ರೂ. ಸಂಗ್ರಹಿಸುವ ಗುರಿಯಿದ್ದು ಸೆಸ್ ಹೊರತುಪಡಿಸಿ 4,412 ಕೋಟಿ ರೂ ಆಸ್ತಿ ತೆರಿಗೆ ಗುರಿ ನಿಗದಿಪಡಿಸಲಾಗಿದೆ. ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಸಮಗ್ರ ತೆರಿಗೆ ಸಂಗ್ರಹ ವಿಧಾನ ಪರಿಷ್ಕರಣೆ ಮಾಡಲು ವಾಣಿಜ್ಯ ಉಪಯೋಗಿ ಎಲ್ಲ ಪ್ರಮುಖ ಕಟ್ಟಡಗಳ ಆಸ್ತಿ ಸ್ವಯಂ ಘೋಷಣೆ ಪತ್ರಗಳನ್ನು ವಿಶೇಷ ತಪಾಸಣೆ ಮಾಡಲಾಗುತ್ತದೆ.
ಇ ಆಸ್ತಿ ತಂತ್ರಾಂಶ: ಆಸ್ತಿ ತೆರಿಗೆ ಹೆಚ್ಚಳ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಖಾತಾ ಮೇಳ ನಡೆಸಲಾಗುತ್ತಿದೆ. ಕ್ರಯ ಪತ್ರ ನೋಂದಣಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ನಗರದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಇ - ಆಸ್ತಿ ತಂತ್ರಾಂಶ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಸಾವಿತ್ರಿ ವಸತಿ ಹಾಸ್ಟೆಲ್: ನಗರದಲ್ಲಿನ ಕಾರ್ಯನಿರತ ಮಹಿಳಾ ಉದ್ಯೋಗಿಗಳಿಗಾಗಿ ವಲಯಗಳಲ್ಲಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ 24 ಕೋಟಿ ರೂ ವೆಚ್ಚದಲ್ಲಿ 'ಸಾವಿತ್ರಿ ವಸತಿ' ಹಾಸ್ಟೆಲ್ ಗಳನ್ನು ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ತೆರೆಯಲಾಗುತ್ತದೆ ಎಂದು ಹೇಳಿದೆ.
ಶೀ ಟಾಯ್ಲೆಟ್: ಬೆಂಗಳೂರಿನ ರಸ್ತೆಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸೌಲಭ್ಯಕ್ಕೆ ಎಂದು 250 ಶೀ- ಟಾಯ್ಲೆಟ್( ಅವಳ ಸ್ಥಳ) ಗಳನ್ನು 2023-24 ನೇ ವರ್ಷದಲ್ಲಿ ನಿರ್ಮಾಣ ಮಾಡಲಾಗುವುದು. ಈ ಅವಳ ಸ್ಥಳಗಳಲ್ಲಿ ಟಾಯ್ಲೆಟ್ ಜಾಗ, ಬಟ್ಟೆ ಬದಲಾಯಿಸುವಿಕೆಗೆ ಜಾಗ, ಕೈತೊಳೆಯುವ ಸೌಲಭ್ಯ, ಸ್ತನಪಾನಕ್ಕೆ ಸ್ಥಳ ಹಾಗೂ ಮೊಬೈಲ್ ಚಾರ್ಜಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದೆ.
ಕಾರ್ಮಿಕರು ಖಾಯಂ: 11,710 ನೇರವೇತನ ಕಾರ್ಮಿಕರನ್ನು ಹಂತ ಹಂತವಾಗಿ ಪಾಲಿಕೆಯ ಖಾಯಂ ನೌಕರರನ್ನಾಗಿ ನೇಮಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಶ್ರವಣ ವಸತಿ ವೃದ್ಧಾಶ್ರಮ: ವಲಯಕ್ಕೆ ಒಂದರಂತೆ 8 ವೃದ್ಧಾಶ್ರಮ ತೆರೆಯುವ ರೀತಿಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ 16 ಕೋಟಿ ರೂ ಗಳನ್ನು 'ಶ್ರವಣ ವಸತಿ' ವೃದ್ಧಾಶ್ರಮ ತೆರೆಯಲಾಗುತ್ತದೆ ಎಂದು ಬಜೆಟ್ ನಲ್ಲಿ ಹೇಳಿದೆ. ಪಟ್ಟಣ ಮಾರಾಟ ಸಮಿತಿ: ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 'ಪಟ್ಟಣ ಮಾರಾಟ ಸಮಿತಿ' ರಚಿಸಲಾಗುತ್ತದೆ. ಅಲ್ಲದೇ ಬೀದಿಬದಿ ವ್ಯಾಪಾರ ವಲಯಗಳನ್ನು ಅಭಿವೃದ್ಧಿಪಡಿಸಲು 25 ಕೋಟಿ ರೂ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ವಿವರಿಸಲಾಗಿದೆ.
ಬೆಂಗಳೂರು ವೈದ್ಯಕೀಯ ವ್ಯವಸ್ಥೆ: ಬೆಂಗಳೂರಿನಲ್ಲಿ ಸಾಮಾನ್ಯ ಜನರ ವೈದ್ಯಕೀಯ ಚಿಕಿತ್ಸೆಗಳಿಗಾಗಿ 'ಬೆಂಗಳೂರು ವೈದ್ಯಕೀಯ ವ್ಯವಸ್ಥೆ ಪ್ರಾರಂಭಿಸಲಾಗುತ್ತದೆ. ರೋಗಿ ವಿಶೇಷ ಚಿಕಿತ್ಸೆ ಅಗತ್ಯ ಪೂರೈಸಲು ಕಾಲ್ ಸೆಂಟರ್, ಹೆಲ್ತ್ ಡೆಸ್ಕ್, ಉಚಿತ ಚಿಕಿತ್ಸೆ ಹಾಗೂ ಚಿಕಿತ್ಸೆ ನಂತರ ಫಾಲೋಅಪ್, ಸೇರಿದಂತೆ ನಾಗರೀಕರ ವೈದ್ಯಕೀಯ ದಾಖಲೆಗಳ ನಿರ್ವಹಣೆ ಮಾಡಲಾಗುತ್ತದೆ. ಈ ಯೋಜನೆಗೆ 2 ಕೋಟಿ ರೂ ಮೀಸಲಿಡಲಾಗಿದೆ ಎಂದು ಬಜೆಟ್ ನಲ್ಲಿ ಮಾಹಿತಿ ನೀಡಲಾಗಿದೆ.
61 ಹೊಸ ಪ್ರಾಥಮಿಕ ಕೇಂದ್ರ:ಪಾಲಿಕೆಯ 243 ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾಗವಾಗಿ 92 ಕೋಟಿ ರೂ ವೆಚ್ಚದಲ್ಲಿ 61 ಹೊಸ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಶಾಲಾ ಕಾಲೇಜುಗಳಿಗೆ 65 ಕೋಟಿ ರೂಪಾಯಿ ಮೀಸಲು: ಪಾಲಿಕೆಯ ಎಲ್ಲ ಶಾಲೆ ಮತ್ತು ಕಾಲೇಜುಗಳಲ್ಲಿ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು 65 ಕೋಟಿ ರೂ ಮೀಸಲಿಡಲಾಗಿದೆ. ಪಾಲಿಕೆಯ ಶಾಲಾ- ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು 'ಸಿಎಸ್‌ಆರ್ ನೀತಿ' ಅಳವಡಿಸಿಕೊಳ್ಳಲಾಗುತ್ತಿದೆ.
ಬಿ ಖಾತೆಯ ನಿವೇಶನಗಳ ಬದಲಾವಣೆಗೆ ಕಾಯ್ದೆ ತಿದ್ದುಪಡಿ: ಪಾಲಿಕೆ ವ್ಯಾಪ್ತಿಯಲ್ಲಿ ಬಿ ಖಾತೆಯ ನಿವೇಶನಗಳಿಗೆ ಎ ಖಾತೆ ನೀಡುವ ಯೋಜನೆ ವರ್ಷಾಂತ್ಯದಲ್ಲಿ ತೆಗೆದುಕೊಳ್ಳಲಾಗಿದೆ. ಇದರಿಂದ ಪಾಲಿಕೆಗೆ ಈ ವರ್ಷ 300 ಕೋಟಿ ರೂ ಆದಾಯ ಬರುವ ನಿರೀಕ್ಷೆಯಿದೆ. 2023-24ನೇ ವರ್ಷದಲ್ಲಿ 800 ಕೋಟಿ ರೂ ಆದಾಯ ನಿರೀಕ್ಷೆಯಿದೆ.
ರಸ್ತೆಗೆ ವೈಟ್ ಟಾಪಿಂಗ್: 1410 ಕೋಟಿ ರೂ. ವೆಚ್ಚದಲ್ಲಿ 150 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್, 350 ಕಿ.ಮೀ ಅರ್ಟೀರಿಯಲ್ ಹಾಗೂ ಸಬ್ ಅರ್ಟಿರಿಯಲ್ ರಸ್ತೆಗಳ ಸಮಗ್ರ ಅಭಿವೃದ್ಧಿಗೆ 450 ಕೋಟಿ ರೂ ಮೀಸಲಿಡಲಾಗಿದೆ. 75 ಪ್ರಮುಖ ಜಂಕ್ಷನ್ ಗಳ ಅಭಿವೃದ್ಧಿ, 60 ಅಡಿ ಅಥವಾ ಅದಕ್ಕೂ ಕಡಿಮೆಯಿರುವ ಸಂಚಾರ ದಟ್ಟಣೆಯ ಬಾಟಲ್ ನೆಕ್ ಪರಿಸ್ಥಿತಿ ನಿವಾರಣೆಗೆ 150 ಕೋಟಿ ರೂ ನಿಗದಿ ಮಾಡಲಾಗಿದೆ.
ಪ್ರವಾಹ ಪರಿಸ್ಥಿತಿಗೆ ಸಮಗ್ರ ಅಭಿವೃದ್ಧಿ ಯೋಜನೆ :ಬೆಂಗಳೂರಿನ ಹವಾಮಾನ ಬದಲಾವಣೆ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಿಸಲು 2023-24ರಿಂದ 2025-26 ರ ಅವಧಿಯಲ್ಲಿ 3 ಸಾವಿರ ಕೋಟಿ ರೂಗಳ ಸಮಗ್ರ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಬಜೆಟ್ ಪುಸ್ತಕದಲ್ಲಿ ಹೇಳಲಾಗಿದೆ.
ಕಟ್ಟಡ ಅವಶೇಷ ತ್ಯಾಜ್ಯಕೇಂದ್ರ ಸ್ಥಾಪನೆ:ಈಗಾಗಲೇ ನಗರದಲ್ಲಿ 1750 ಮೆಟ್ರಿಕ್ ಟನ್ ನಿರ್ಮಾಣ ಹಾಗೂ ಕಟ್ಟಡ ಅವಶೇಷ ತ್ಯಾಜ್ಯಕೇಂದ್ರ ಸ್ಥಾಪಿಸಿದ್ದು, 2023-24ನೇ ವರ್ಷದಲ್ಲಿ ಇನ್ನೂ 5 ಕೇಂದ್ರ ಸೇರಿ ಒಟ್ಟು 3,000 ಮೆಟ್ರಿಕ್ ಟನ್ ತ್ಯಾಜ್ಯ ನಿರ್ವಹಣಾ ಕೇಂದ್ರ ಕಾರ್ಯ ರೂಪಕ್ಕೆ ಬರಲಿದೆ. ಈ ಕಟ್ಟಡ ತ್ಯಾಜ್ಯ ಕೇಂದ್ರ ಮತ್ತೊಮ್ಮೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಕಚ್ಚಾವಸ್ತುಗಳನ್ನು ಉತ್ಪಾದಿಸಲಿವೆ. ಪ್ರತಿ ವಾರ್ಡ್ ನಲ್ಲಿ ಘನತ್ಯಾಜ್ಯ ಸಂಸ್ಕರಣಾ ಕೇಂದ್ರ ಹಾಗೂ ಹಸಿತ್ಯಾಜ್ಯ ಕಾಂಪೋಸ್ಟ್ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಹೊಸ ಉದ್ಯಾನವನಗಳಿಗೆ 15 ಕೋಟಿ:ಪಾಲಿಕೆ ವ್ಯಾಪ್ತಿಯಲ್ಲಿ 2022-23ರಲ್ಲಿ 10 ಉದ್ಯಾನವನ ನಿರ್ಮಿಸಲಾಗಿದ್ದು, ಈ ವರ್ಷದಲ್ಲಿ ನಗರದ ಪಾರ್ಕ್ ಗಳ ಸಂಖ್ಯೆ 1223 ರಿಂದ 1233ಕ್ಕೆ ಹೆಚ್ಚಾಗಿದೆ. 2023-24ರಲ್ಲಿ 15 ಹೊಸ ಉದ್ಯಾನವನಗಳಿಗೆ 15 ಕೋಟಿ ರೂ ಹಾಗೂ ಹಳೆ ಉದ್ಯಾನಗಳ ನಿರ್ವಹಣೆಗೆ 80 ಕೋಟಿ ರೂ ನಿಗದಿಪಡಿಸಲಾಗಿದೆ. ಈ 2023-24ರಲ್ಲಿ ಸಸಿ ಬೆಳೆಸಲು, ಬೆಳೆಸುವಿಕೆಗೆ, 15 ಲಕ್ಷ ಸಸಿ ನೆಡಲು ಹಾಗೂ ನಿರ್ವಹಣೆಗೆ 40 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಹೇಳಿದೆ.
ನಗರದ ಪ್ರವಾಸ ಸ್ಥಳಗಳ ಅಭಿವೃದ್ಧಿ:ನಗರದ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2023-24ರಲ್ಲಿ180 ಕೋಟಿ ರೂ ವೆಚ್ಚ ಮಾಡಲಾಗುತ್ತದೆ. ಕೆಂಪಾಂಬುದಿ ಕೆರೆ ಬುಲ್ ಟೆಂಪಲ್ ರಸ್ತೆ ಪರಿಸರ, ಸ್ಯಾಂಕಿ ಕೆರೆ, ಕಾಡುಮಲ್ಲೇಶ್ವರ ದೇಗುಲದ ಪರಿಸರ ಹಾಗೂ ಹಲಸೂರು ಕೆರೆ, ಸೋಮೇಶ್ವರ ದೇಗುಲದ ಪರಿಸರವನ್ನು ಪ್ರವಾಸಿ ಕಾರಿಡಾರ್ ಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಬಜೆಟ್ದಲ್ಲಿ ವಿವರಿಸಲಾಗಿದೆ.