ಬೆಂಗಳೂರು: ಬಿಬಿಎಂಪಿ ವಿಧೇಯಕವನ್ನು ಪರಿಶೀಲಿಸಲು ರಚಿಸಲಾಗಿರುವ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯ ಮೊದಲ ಸಭೆ ವಿಧಾನಸೌಧದಲ್ಲಿ ಇಂದು ನಡೆಯಿತು.
ಬಿಬಿಎಂಪಿ ವಿಧೇಯಕವನ್ನು ಮಾರ್ಚ್ನಲ್ಲಿಯೇ ಸದನದಲ್ಲಿ ಮಂಡನೆ ಮಾಡಲಾಗಿತ್ತು. ಆದರೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ, ವಿಧೇಯಕವನ್ನು ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು. ಹಿರಿಯ ಶಾಸಕ ಎಸ್. ರಘು ಸಮಿತಿಯ ಅಧ್ಯಕ್ಷರಾಗಿದ್ದು, ಇಂದು ಈ ಸಮಿತಿಯ ಮೊದಲ ಸಭೆ ಜರುಗಿತು.
ಸಭೆ ಬಳಿಕ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರಿಗೆ ಹೊಸ ಕಾಯ್ದೆ ತರುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಗಿದೆ. ಕಾಯ್ದೆ ರಚನೆಗೆ ಕರಡು ತಯಾರಿ ನಡೆಯುತ್ತಿದ್ದು, ಬೃಹತ್ ಬೆಂಗಳೂರಿನ ಆಡಳಿತ ಹೇಗಿರಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ 15 ವಲಯಗಳ ರಚನೆ ಆಗಲಿವೆ. ಹೊಸ ಕಾಯ್ದೆಯಲ್ಲಿ ವಲಯವಾರು ಕಮಿಟಿಗಳನ್ನು ರಚನೆ ಮಾಡಲಾಗುತ್ತದೆ ಹಾಗೂ ಆ ವಲಯಗಳಿಗೆ ಸಂಪೂರ್ಣ ಅಧಿಕಾರ ಇರುತ್ತದೆ. ವಲಯವಾರು ಕಮಿಟಿಗಳ ಕೆಳಗೆ ವಾರ್ಡ್ ಕಮಿಟಿಗಳು ಇರುತ್ತವೆ ಎಂದು ತಿಳಿಸಿದರು.