ಬೆಂಗಳೂರು : ಕೋವಿಡ್ ಸೋಂಕಿತರಿಗೆ ನೀಡಬೇಕಿದ್ದ ಬೆಡ್‌ಗಳನ್ನು ಬಿಬಿಎಂಪಿ ವಾರ್ ರೂಮ್‌ಗಳಲ್ಲಿ ಬ್ಲಾಕ್ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಮೇಲ್ನೋಟಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲ ಎಂಬ ಹಿನ್ನೆಲೆ ಸೆಷನ್ಸ್ ನ್ಯಾಯಾಧೀಶ ಬಿ. ವೆಂಕಟೇಶ್ ಅವರು ಆರೋಪಿಗಳಾದ ಡಾ. ರೆಹಾನ್ ಶಹೀದ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಶಶಿಕುಮಾರ್ಗೆ ಜಾಮೀನು ನೀಡಿ ಆದೇಶಿಸಿದ್ದಾರೆ.
ಆರೋಪಿತರು ತಲಾ 50 ಸಾವಿರ ರೂ. ಮೊತ್ತಕ್ಕೆ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು. ಸಾಕ್ಷ್ಯ ನಾಶಪಡಿಸಬಾರದು. ನ್ಯಾಯಾಲಯ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಮತ್ತದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಬಾರದು. ತನಿಖಾಧಿಕಾರಿ ಎದುರು ಪ್ರತಿ 15 ದಿನಕ್ಕೊಮ್ಮೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕೋವಿಡ್ ವಾರ್ ರೂಮ್‌ಗಳು ನೋಡಲ್ ಆಫೀಸರ್‌ಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತಿವೆ. ಅಲ್ಲಿ ಓರ್ವ ವೈದ್ಯ ಹಾಗೂ ಡೇಟಾ ಎಂಟ್ರಿ ಆಪರೇಟರ್ ಸೇರಿ ಬೆಡ್ ಬ್ಲಾಕ್ ಮಾಡಲು ಸಾಧ್ಯವಿಲ್ಲ. ಅರ್ಜಿದಾರರು ಯಾರಿಂದಲೂ ಹಣ ಪಡೆದಿಲ್ಲ. ಹಾಗೆ ಪಡೆಯಲಿಕ್ಕೂ ಸಾಧ್ಯವಿಲ್ಲ.
ಅವರಿಗೆ ತೀರಾ ಕಡಿಮೆ ಅಧಿಕಾರಗಳಷ್ಟೇ ಇದ್ದು, ಎಲ್ಲವೂ ಮೇಲುಸ್ತುವಾರಿಯಲ್ಲಿ ನಡೆಯುತ್ತದೆ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ನೀಡಬೇಕೆಂದು ಕೋರಿದ್ದರು. ಸರ್ಕಾರದ ಪರ ವಕೀಲರು ಜಾಮೀನು ನೀಡಿದರೆ ಆರೋಪಿಗಳು ತಲೆಮರೆಸಿಕೊಳ್ಳಬಹುದು ಅಥವಾ ಸಾಕ್ಷ್ಯನಾಶಪಡಿಸಬಹುದು. ಹೀಗಾಗಿ, ಜಾಮೀನು ನೀಡಬಾರದು ಎಂದು ವಾದಿಸಿದ್ದರು.