ಬೆಂಗಳೂರು: ಪ್ರಸಕ್ತ 2020ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕವನ್ನು ಜಂಟಿ ಸಲಹಾ ಸಮಿತಿಗೆ ವಹಿಸಲಾಗಿದೆ.
ವಿಧಾನಸಭೆಯಲ್ಲಿ ಇಂದು ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ಕಂದಾಯ ಸಚಿವ ಆರ್.ಅಶೋಕ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.
ನಂತರ ಕಾಯ್ದೆ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಬಿಬಿಎಂಪಿ 716 ಚ.ಕಿ.ಮೀ ವಿಸ್ತಾರವಾಗಿದೆ. ಬೆಂಗಳೂರು ಬೆಳೆಯುತ್ತಿದೆ. ವಿಶ್ವಮಟ್ಟದಲ್ಲಿ ಬೆಂಗಳೂರು ಪ್ರಖ್ಯಾತಿ ಗಳಿಸಿದೆ. ಆದರೂ 1976ರ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಕೆಎಂಸಿ) ಕಾಯ್ದೆಯೇ ಅನ್ವಯವಾಗುತ್ತಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಸದುದ್ದೇಶದಿಂದ ಬಿಬಿಎಂಪಿಗೆ ಪ್ರತ್ಯೇಕ ವಿಧೇಯಕವನ್ನು ತರುತ್ತಿದ್ದೇವೆ. ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರಿಗೆ ಸೀಮಿತವಾಗಿ ವಿಧೇಯಕವನ್ನು ತರಲಾಗಿದೆ. ಸದನ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.
ಬಿಬಿಎಂಪಿ ತಿದ್ದುಪಡಿ ವಿಧೇಯಕಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರೋಧ ವ್ಯಕ್ತಪಡಿಸಿದರು. ಸಮಗ್ರ ಚರ್ಚೆಯ ನಂತರ ವಿಧೇಯಕ ಅಂಗೀಕಾರ ಆಗಬೇಕು. ಗಡಿಬಿಡಿಯಲ್ಲಿ ವಿಧೇಯಕ ಅಂಗೀಕಾರ ಬೇಡ. ನಾನು ಆಡಳಿತ ಪಕ್ಷದ ಸದಸ್ಯನಾಗಿದ್ದೇನೆ. ಆದರೂ ಈ ವಿಧೇಯಕ ಯಥಾವತ್ ಜಾರಿ ಮಾಡುವುದು ಬೇಡ. ವಿಧೇಯಕದ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ಶಾಸಕರೂ ಇಲ್ಲ. ಬೆಂಗಳೂರಿನ ಶಾಸಕರು ಏನೆಲ್ಲಾ ಭಾವನೆ ವ್ಯಕ್ತಪಡಿಸುತ್ತಾರೆ ತಿಳಿಯಬೇಕು. ಅವಸರದಲ್ಲಿ ವಿಧೇಯಕ ಜಾರಿ ಬೇಡ. ಇದು ಸಮಗ್ರವಾಗಿ ಚರ್ಚೆ ಆಗಬೇಕಿದೆ. ವಿರೋಧ ಪಕ್ಷದವರು ಸಹ ಇಂದು ಸದನದಲ್ಲಿ ಇಲ್ಲ. ಅವರೂ ಸಹ ಬಂದ ಮೇಲೆ ಚರ್ಚೆ ಆಗಲಿ. ಇಂದು ಸಾಧ್ಯವಿಲ್ಲ ಅನ್ನೋದಾದರೆ ಮುಂದಿನ ಕಲಾಪದಲ್ಲಾದರೂ ಚರ್ಚೆ ಆಗಲಿ. ಆದರೆ ಚರ್ಚೆ ಆಗದೆ ಇದಕ್ಕೆ ಅನುಮೋದನೆ ಬೇಡ ಎಂದು ಮನವಿ ಮಾಡಿದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ನಮ್ಮ ಬಿಬಿಎಂಪಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಈ ವಿಧೇಯಕ ಸೂಕ್ತವಾಗಿದೆ. ಹಾಗಾಗಿ ಈ ಬಿಲ್ಲನ್ನು ಬೆಂಬಲಿಸುತ್ತೇನೆ. ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಹಲವಾರು ಪ್ರದೇಶಗಳು ಬಿಬಿಎಂಪಿಗೆ ಸೇರ್ಪಡೆಯಾಗಬೇಕು. ವಾರ್ಡ್ಗಳ ಸಂಖ್ಯೆ ಹೆಚ್ಚಾಗಬೇಕು. ಬಿಬಿಎಂಪಿಗೆ ಬರಬೇಕಾಗಿರುವ ತೆರಿಗೆ ಆದಾಯ ಸಂಗ್ರಹ ಹೆಚ್ಚಾಗಬೇಕು. ಅದಕ್ಕೆ ಈ ಬಿಲ್ ಸೂಕ್ತವಾಗಿದೆ ಎಂದು ಹೇಳಿದರು.
ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ಪ್ರತಿಪಕ್ಷ ಶಾಸಕರಿಲ್ಲದೆ ಈ ಕಾಯ್ದೆ ಅಂಗೀಕಾರ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಇದುವರೆಗೆ ನಮಗೆ ಈ ಕಾಯ್ದೆಯ ಪ್ರತಿ ಬಂದಿಲ್ಲ. ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳದೆ ಕಾಯ್ದೆ ಪಾಸ್ ಮಾಡುವುದು ಸೂಕ್ತವಲ್ಲ ಎಂದರು.
ಬಿಬಿಎಂಪಿ ಕಾಯ್ದೆಗೆ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್, ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ, ಪೂರ್ಣಿಮಾ ಸೇರಿದಂತೆ ಹಲವು ಶಾಸಕರ ವಿರೋಧ ವ್ಯಕ್ತಪಡಿಸಿ ಜಂಟಿ ಸಲಹಾ ಸಮಿತಿಗೆ ವಹಿಸಲು ಒತ್ತಾಯಿಸಿದರು. ಇದನ್ನು ಜಂಟಿ ಸಲಹಾ ಸಮಿತಿಗೆ ಒಪ್ಪಿಸಬಹುದು. ನಮ್ಮ ಸರ್ಕಾರಕ್ಕೆ ಬಿಬಿಎಂಪಿಯ ಅಭಿವೃದ್ಧಿಯಷ್ಟೇ ಮುಖ್ಯ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಇದಕ್ಕೆ ಕಾನೂನು ಸಚಿವ ಮಾಧುಸ್ವಾಮಿ, ವಸತಿ ಸಚಿವ ವಿ.ಸೋಮಣ್ಣ ಸಹಮತ ವ್ಯಕ್ತಪಡಿಸಿದರು.
ಬಿಬಿಎಂಪಿ ಕಾಯ್ದೆಯನ್ನು ಜಂಟಿ ಸಲಹಾ ಸಮಿತಿ ಪರಾಮರ್ಶೆಗೆ ಒಪ್ಪಿಸುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದರು. ಇದೇ ಸಂದರ್ಭದಲ್ಲಿ ದಿನೇಶ್ ಗುಂಡರಾವ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಪತ್ರ ಬರೆದಿರುವುದನ್ನು ಸ್ಪೀಕರ್ ಸದನಕ್ಕೆ ತಿಳಿಸಿದರು.
ಬಿಬಿಎಂಪಿ ಕಾಯ್ದೆ ಬಗ್ಗೆ ಚರ್ಚೆ ಆಗಬೇಕಿದೆ. ಒಂದು ಸಮಿತಿ ರಚನೆ ಮಾಡಿ, ಇದರ ಬಗ್ಗೆ ಸಮಗ್ರ ಪರಿಶೀಲನೆ ಆಗಬೇಕಿದೆ. ಬಹುತೇಕ ಸದಸ್ಯರ ಬೇಡಿಕೆ ಮೇಲೆ ಬಿಬಿಎಂಪಿ ಕಾಯ್ದೆಯನ್ನು ಜಂಟಿ ಆಯ್ಕೆ ಸಮಿತಿಗೆ ವರ್ಗಾವಣೆ ಮಾಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸ್ಪೀಕರ್ ಮಾಹಿತಿ ನೀಡಿದರು.