ಬೆಂಗಳೂರು : ನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು ಜಾರಿಗೆ ತಂದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಹೀರಾತು ನಿಯಮ-2019'ನ್ನು ನಗರಾಭಿವದ್ಧಿ ಇಲಾಖೆ ಹಿಂಪಡೆದಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ. ಆಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ವಾದಿಸಿ, ನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಹೀರಾತು ನಿಯಮ-2019'ನ್ನು ಜಾರಿಗೆ ತರಲಾಗಿತ್ತು.
ಆದರೆ, 2021ರ ಜು.26ರಂದು ನಗರಾಭಿವದ್ಧಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಕುರಿತಂತೆ 2021ರ ಸೆ.14ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿ, ಸಂಬಂಧಿತ ಲಿಖಿತ ಹೇಳಿಕೆಯನ್ನು ಪೀಠಕ್ಕೆ ಸಲ್ಲಿಸಿದರು.
ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಪೀಠ, ಜಾಹೀರಾತು ನಿಯಮಗಳನ್ನು ಜಾರಿಗೆ ತಂದು ಹೊರಡಿಸಲಾದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಆದರೆ, ನಿಯಮಗಳಿಗೆ ಸಂಬಂಧಿಸಿದ ಆದೇಶ ಹಿಂಪಡೆಯಲಾಗಿದೆ ಎಂದು ಸರ್ಕಾರ ಹೇಳಿರುವುದರಿಂದ ಅರ್ಜಿ ಸಂಬಂಧ ಯಾವುದೇ ಆದೇಶ - ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು. ಅರ್ಜಿದಾರರ ಪರ ವಕೀಲ ಜಿ.ಆರ್ ಮೋಹನ್ ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ :
ಅನಧಿಕೃತ ಜಾಹೀರಾತು ಪ್ರದರ್ಶನ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ಹೈಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಹಂತದಲ್ಲಿ ಸರ್ಕಾರ ರೂಪಿಸಿರುವ ಜಾಹೀರಾತು ನಿಯಮಗಳು, ಹೈಕೋರ್ಟ್, ಸುಪ್ರೀಂಕೋರ್ಟ್ ಮತ್ತು ಕರ್ನಾಟಕ ಮುಕ್ತ ಪ್ರದೇಶ ವಿರೂಪ ತಡೆ ಮತ್ತು ಸಂರಕ್ಷಣಾ ಕಾಯ್ದೆ-1981ಗೆ ವಿರುದ್ಧವಾಗಿದೆ. ಬಿಬಿಎಂಪಿ ಜಾಹೀರಾತು ಬೈಲಾ-2018ಕ್ಕೂ ವಿರುದ್ಧವಾಗಿದೆ ಎಂದು ಅರ್ಜಿದಾರರ ಆರೋಪಿಸಿದ್ದರು.
ಅಲ್ಲದೇ, 2019ರ ಜಾಹೀರಾತು ನಿಯಮಗಳನ್ನು ಹಿಂದಿನ ಸಿಎಂ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಿದ ದಿನವೇ ಜಾರಿಗೆ ತಂದು ಅಧಿಸೂಚನೆ ಹೊರಡಿಸಲಾಗಿದೆ.
ನ್ಯಾಯಾಲಯಗಳ ಆದೇಶವನ್ನು ಜಾರಿಗೆ ತರುವ ಬದಲು ರಾಜ್ಯ ಸರ್ಕಾರವು ವಿವಿಧ ಜಾಹೀರಾತು ಅಳವಡಿಕೆಗೆ ಅನುಮತಿ ನೀಡುವ ಸಲುವಾಗಿಯೇ 2019ರ ನಿಯಮಗಳನ್ನು ಜಾರಿಗೆ ತಂದಿದೆ. ಆದ್ದರಿಂದ `ಬಹತ್ ಬೆಂಗಳೂರು ಮಹಾನಗರ ಜಾಹೀರಾತು ನಿಯಮ-2019' ಜಾರಿಗೆ ತಂದು ರಾಜ್ಯ ನಗರಾಭಿವದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.