ಬೆಂಗಳೂರು: ಸಣ್ಣ ರಸ್ತೆಗಳಲ್ಲಿ ಮಾತ್ರ ಪುಶ್ಕಾರ್ಟ್ಗಳನ್ನು ಬಳಸಬೇಕು ಮತ್ತು ಎಲ್ಲ ಹಳೆಯ ಪುಶ್ಕಾರ್ಟ್ (ತೆಳ್ಳುವ ಗಾಡಿ) ಗಳನ್ನು ಹಿಂತೆಗದುಕೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಇಂದು ಸೂಚನೆ ನೀಡಿದರು.
ಇಂದು ಗಾಂಧಿನಗರ ವಾರ್ಡ್ 94 ರ ವ್ಯಾಪ್ತಿಯ ಕೇಂದ್ರ ಹಾಗೂ ಕಸ ವಿಂಗಡಣೆ ಸ್ಥಳಕ್ಕೆ ಆಡಳಿತಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುಶ್ ಕಾರ್ಟ್ ಬಳಕೆ ಮಾಡುವುದನ್ನು ನೋಡಿದ ಅವರು, ಇನ್ನೂ ಏಕೆ ಪುಶ್ ಕಾರ್ಟ್ಗಳನ್ನು ಬಳಕೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಜೊತೆಗೆ ಎಲ್ಲ ಹಳೆಯ ಪುಶ್ ಕಾರ್ಟ್ ಗಳನ್ನು ಹಿಂತೆಗದುಕೊಳ್ಳಲು ಸೂಚನೆ ನೀಡಿದರು.
ಇದಕ್ಕೆ ವಿಶೇಷ ಆಯುಕ್ತರು ಪ್ರತಿಕ್ರಿಯಿಸಿ, ಪುಶ್ಕಾರ್ಟ್ ಗಳನ್ನು ಆಟೋ, ಟಿಪ್ಪರ್ ಗಳು ಹೋಗದ ಸ್ಥಳಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದೆ. ರಸ್ತೆ ಬದಿ ಗುಡಿಸುವ ತ್ಯಾಜ್ಯವನ್ನು ಅಲ್ಲಲ್ಲಿ ಗುಡ್ಡೆ ಹಾಕಿ ಆಟೋಗಳ ಮೂಲಕವೇ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪೌರ ಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಕೂಡ ಆಡಳಿತಗಾರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಯೋ ಮೆಟ್ರಿಕ್ ಯಂತ್ರದಿಂದ ಹಾಜರಾತಿ ಪಡೆದಿರುವುದನ್ನು ಪರಿಶೀಲನೆ ನಡೆಸಿದರು. ಹಾಗೂ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರದ ತಪಾಸಣೆ ನಡೆಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಯಂ, ನೇರ ವೇತನ ಪಾವತಿ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರಿಗೂ ಒಂದೇ ಮಾದರಿಯ ಸಮವಸ್ತ್ರ ವಿತರಿಸಬೇಕು. ಸಮವಸ್ತ್ರಕ್ಕೆ ಬಿಬಿಎಂಪಿ ಚಿಹ್ನೆ ಇರಬೇಕು. ಜೊತೆಗೆ ಎಲ್ಲ ಪೌರ ಕಾರ್ಮಿಕರಿಗೆ ಶೂ, ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಎಲ್ಲ ಸುರಕ್ಷಾ ಸಾಮಗ್ರಿಗಳನ್ನು ನೀಡಬೇಕು. ಎಲ್ಲರೂ ಸುರಕ್ಷಾ ಸಾಮಗ್ರಿಗಳನ್ನು ಧರಿಸಿಯೇ ಕೆಲಸ ಮಾಡಬೇಕು ಎಂದು ಆಡಳಿತಗಾರರು ಸೂಚನೆ ನೀಡಿದರು.
ಪಾದಚಾರಿ ಮಾರ್ಗಗಳನ್ನು ಸರಿಪಡಿಸಿ:
ಪಾದಚಾರಿ ಮಾರ್ಗಗಳಲ್ಲಿ ಕಸ ತೆರವುಗೊಳಿಸುವುದು ಹಾಗೂ ಗುಂಡಿಗಳಿದ್ದರೆ ಕೂಡಲೇ ದುರಸ್ತಿ ಕಾಮಗಾರಿ ಕೈಗೊಂಡು ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜೊತೆಗೆ ರಸ್ತೆ ಮಾರ್ಗದಲ್ಲಿ ನಿಂತಿರುವ ಹಳೆಯ ವಾಹನಗಳನ್ನು ಪೊಲೀಸ್ ಅಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ಕೂಡಲೇ ತೆರವು ಮಾಡಲು ಕ್ರಮವಹಿಸಿ. ಹಾಗೂ ಪಾದಚಾರಿ ಮಾರ್ಗದ ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.