ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2023-24ನೇ ಸಾಲಿನ ಆಯವ್ಯಯ ಅಂದಾಜು ಮಂಡನೆ ಮಾಡಿದೆ. ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯವ್ಯಯ ಮಂಡಿಸಿದರು. ಒಟ್ಟು ಆಯವ್ಯಯ ಅಂದಾಜು 11,157 ಕೋಟಿ ರೂ. ಇದೆ. ಬಜೆಟ್ ಮುಖ್ಯಾಂಶಗಳು ಹೀಗಿವೆ..
ಮುಖ್ಯವಾಗಿ ಮೂಲಸೌಕರ್ಯ, ಅಭಿವೃದ್ಧಿ ಕಾರ್ಯ ಮತ್ತು ಸಾರ್ವಜನಿಕ ಕಾಮಗಾರಿಗಳಿಗಾಗಿ ಒಟ್ಟು 7103 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರೆ, ಘನ ತ್ಯಾಜ್ಯ ನಿರ್ವಹಣೆಗೆ 1,643 ಕೋಟಿ ರೂಪಾಯಿ ನೀಡಲಾಗಿದೆ.
ಪ್ರವಾಸೋದ್ಯಮ: ಪ್ರವಾಸೋದ್ಯಮಕ್ಕೆ 180 ಕೋಟಿ ರೂ ಮೀಸಲಿಟ್ಟಿದ್ದು, ಕೆಂಪಾಂಬುಧಿ, ಸ್ಯಾಂಕಿ, ಹಲಸೂರು ಕೆರೆ ಪ್ರವಾಸಿ ಕಾರಿಡಾರ್ ನಿರ್ಮಾಣ ಹಾಗೂ ಪ್ರವಾಸಿಗರಿಗಾಗಿ 10 ಸಿಟಿ ಪ್ಲಾಜಾ ನಿರ್ಮಾಣಕ್ಕೆ ಸಿದ್ದತೆ ನಡೆದಿದೆ.
ಪರಿಸರ: ಪರಿಸರ ಸಂಬಂಧಿ ಕಾರ್ಯಗಳಿಗೆ 17.25 ಕೋಟಿ ರೂ ಮೀಸಲಿಡಲಾಗಿದೆ. ಮೇಲ್ಸೇತುವೆ ಕೆಳಗೆ ಉದ್ಯಾನ ನಿರ್ಮಾಣ ಹಾಗೂ ಇವಿ ಕಾರ್‌ಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಹಳೆಯ ಸೋಡಿಯಂ ವೇಪರ್ ಲೈಟುಗಳ ಬದಲಿಗೆ ಎಲ್ಇಡಿ ಲೈಟುಗಳನ್ನು ಹಂತ ಹಂತವಾಗಿ ಕಾರ್ಯ ರೂಪಕ್ಕೆ ತರಲು 2023- 24ರಲ್ಲಿ 17.25 ಕೋಟಿ ರೂ. ಮೀಸಲಿರಿಸಲಾಗಿದೆ. ಜೊತೆಗೆ 15 ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ಪಾಲಿಕೆಯ ಎಲ್ಲಾ ಕಟ್ಟಡಗಳ ಮೇಲೂ ಸೋಲಾರ್ ರೂಫ್ ಟಾಪ್ ಮೀಟರಿಂಗ್ ಅಳವಡಿಸುವ ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಶಿಕ್ಷಣ: ಸಾರ್ವಜನಿಕ ಶಿಕ್ಷಣಕ್ಕಾಗಿ 152 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಬಿಬಿಎಂಪಿಯ ಶಾಲೆಗಳಲ್ಲಿನ ಮಕ್ಕಳಿಗೆ 10 ಸಾವಿರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ಕೊಡಲು 25 ಕೋಟಿ ರೂ. 160 ಕೋಟಿ ರೂ ವೆಚ್ಚದಲ್ಲಿ ಶಾಲೆಗಳ ನವೀಕರಣ, ಸ್ಮಾರ್ಟ್ ತರಗತಿಗಳು, ಪಠ್ಯ ಪುಸ್ತಕ, ಸಮವಸ್ತ್ರ, ಶೂ ಹಾಗು ಸಾಕ್ಸ್ ವಿತರಣೆ, ಪಿಯುಸಿ ಮತ್ತು ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು. ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಕನಸಿನ ಶಾಲೆ ಆರಂಭ ಮಾಡಲಾಗುವುದು. ಓದುವ ಬೆಳಕು ಎಂಬ ಹೊಸ ಯೋಜನೆ ಆರಂಭಿಸುವುದು. ಎಲ್ಲ ವಾರ್ಡ್ಗಳಲ್ಲಿ ಪಬ್ಲಿಕ್ ಸ್ಕೂಲ್ ಸ್ಥಾಪನೆಗೆ ಯೋಜನೆ ತರಲಾಗುತ್ತಿದೆ.
ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳಿಗೆ 344 ಕೋಟಿ ರೂ: ಕೋವಿಡ್ ಬೂಸ್ಟರ್ ಡೋಸ್‌ಗೆ ಒತ್ತು ನೀಡುವುದು. ಕೋವಿಡ್ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ತಲಾ 500 ರೂ. ಉತ್ತೇಜನ. ಕೋವಿಡ್ ವೇಳೆ ಮೃತಪಟ್ಟ ಸಿಬ್ಬಂದಿಗೆ 30 ಲಕ್ಷ ರೂ ಪರಿಹಾರ ನೀಡಲಾಗುವುದು. ಡಯಾಲಿಸಿಸ್ ಕೇಂದ್ರಗಳ ನಿರ್ಮಾಣ ಮಾಡುವುದು. ಗರ್ಭಿಣಿ ಮತ್ತು ಮಕ್ಕಳ ಆಸ್ಪತ್ರೆಗಳ ಹೆಚ್ಚಳ ಹಾಗೂ ನುರಿತ ವೈದ್ಯರ ನೇಮಕಾತಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
ನಗರ ಯೋಜನೆ: ಕಟ್ಟಡಗಳ ನಿರ್ಮಾಣಕ್ಕೆ ಬೇರೆ ಇಲಾಖೆಗಳಿಂದ ಪಡೆಯುತ್ತಿದ್ದ ಎನ್.ಓ.ಸಿ ರದ್ದು ಮಾಡಲಾಗುವುದು. ಏಕಗವಾಕ್ಷಿಯಲ್ಲಿ ಆನ್‌ಲೈನ್ ಮೂಲಕ ಪಡೆಯಲು ಸಿದ್ದತೆ ನಡೆಸಲಾಗುತ್ತದೆ. ನಗರ ಯೋಜನೆ ಮತ್ತು ನಿಯಂತ್ರಣಕ್ಕಾಗಿ 72 ಕೋಟಿ ಹಾಗೂ ಕೌನ್ಸಿಲ್‌ಗಾಗಿ 13 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಅನುದಾನ ಹಂಚಿಕೆ ವಿವರಗಳು: ಕಟ್ಟಡ ನಕ್ಷೆಗಳ ಡಿಜಟಲೀಕರಣ 2 ಕೋಟಿ ರೂಪಾಯಿ, ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿಯಂತೆ ಒಟ್ಟು 8 ಕೋಟಿ, ಅನಧಿಕೃತ ಕಟ್ಟಡ ತೆರವುಗೊಳಿಸಲು ಒಮ್ಮೆ 10 ಕೋಟಿ ರೂಪಾಯಿ ಹಾಗೂ ಕಸಾಯಿಖಾನೆಗಳ ನಿರ್ವಹಣೆಗಾಗಿ 1 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ಕಂದಾಯ ವಿಭಾಗದ ನಿರ್ವಣೆಗಾಗಿ 524 ಕೋಟಿ: ಖಾತಾ ಮೇಳಕ್ಕೆ ಚಾಲನೆ ನೀಡಲಾಗುತ್ತಿದ್ದು, ಸಕಾಲದಲ್ಲಿ ಅರ್ಜಿಗಳ ವಿಲೇವಾರಿ ವೇಗ ಹೆಚ್ಚಳ, ಇ-ಆಸ್ತಿ ತಂತ್ರಾಂಶ ಎಲ್ಲ ವಲಯಗಳಿಗೆ ವಿಸ್ತರಣೆ ಮಾಡಲಾಗುವುದು. ತೆರಿಗೆ ಸಂಗ್ರಹ ಹೆಚ್ಚಳ ಮಾಡಲು 4790 ಕೋಟಿ ಗುರಿ ಇಟ್ಟುಕೊಳ್ಳಲಾಗಿದೆ. ಬಿ ಖಾತೆ ನಿವೇಶನಗಳಿಗೆ ಕ್ರಮಬದ್ದವಾಗಿ ಎ ಖಾತೆ ವಿತರಣೆಗೆ 300 ಕೋಟಿ ಆದಾಯ ನಿರೀಕ್ಷೆ ಇದೆ.
ಇದನ್ನೂ ಓದಿ: ಬಿಬಿಎಂಪಿ ಕಾಯ್ದೆ 2020 ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ: ಸರ್ಕಾರಕ್ಕೆ ನೋಟಿಸ್ ಜಾರಿ
ಸಮಾಜ ಕಲ್ಯಾಣಕ್ಕೆ 513 ಕೋಟಿ ರೂಪಾಯಿ, ಸಾಮಾನ್ಯ ಆಡಳಿತ ವೆಚ್ಚಗಳಿಗೆ 602 ಕೋಟಿ ರೂಪಾಯಿ, ಉದ್ಯಾನಗಳ ನಿರ್ವಹಣೆ ಮಾಡುತ್ತಿರುವ ತೋಟಗಾರಿಕೆ ಇಲಾಖೆಗೆ 129 ಕೋಟಿ, ನಗರ ಅರಣ್ಯೀಕರಣಕ್ಕೆ 57 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ: ಹೊಸ ವ್ಯವಸ್ಥೆ, ತಂತ್ರಾಂಶ, ವಿನ್ಯಾಸ, ಸಮಸ್ಯೆ ನಿವಾರಣೆಗೆ ಉತ್ತೇಜಿಸಲು ಮತ್ತು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಪರಿವರ್ತನೆಯ ಮನೋಭಾವ ಬೆಳೆಸುವ ಸದುದ್ದೇಶದಿಂದ ಪ್ರತಿ ವರ್ಷವೂ ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
2 ಲಕ್ಷ ರೂ ಮೊತ್ತದ ಈ ಪುರಸ್ಕಾರಕ್ಕೆ ಪಾಲಿಕೆಯ ಯಾವುದೇ ಅಧಿಕಾರಿ, ಸಿಬ್ಬಂದಿ ಆಯ್ಕೆಯಾಗಬಹುದಾಗಿದೆ. ಪ್ರಶಸ್ತಿ ಆಯ್ಕೆಯ ನಿಯಮ, ಮಾರ್ಗದರ್ಶಿ ಸೂತ್ರ, ಅರ್ಜಿ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಬಜೆಟ್‌ನಲ್ಲಿ ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ.
ಕಳೆದ ಸಲ ಮಧ್ಯರಾತ್ರಿ ಬಜೆಟ್ ಮಂಡನೆ ಆಗಿತ್ತು. ವೆಬ್ ಸೈಟ್ನಲ್ಲಿ ಕೊನೆಯ ದಿನದಂದು (ಮಾರ್ಚ್ 31 ರಂದು) ಅಪ್ಲೋಡ್ ಮಾಡಲಾಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಗ ಆಕ್ಷೇಪ ವ್ಯಕ್ತವಾಗಿತ್ತು. ಟೀಕೆಗಳನ್ನು ಹೋಗಲಾಡಿಸಲು ಈ ಸಲ ಬಜೆಟ್ ಮಂಡನೆ ಪುರಭವನಕ್ಕೆ ಶಿಫ್ಟ್ ಆಗಿತ್ತು. ಕಳೆದ ಬಾರಿಯಂತೆ ರಾತ್ರೋರಾತ್ರಿ ಬಜೆಟ್ ಮಂಡನೆ ಮಾಡದಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ.