ಬೆಂಗಳೂರು: ಹೊಸ ಗುಡ್ಡದಹಳ್ಳಿಯ ರಾಸಾಯಿನಿಕ ಕಾರ್ಖಾನೆಯ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡ ಸಾಕಷ್ಟು ಪ್ರಮಾಣದ ಹಾನಿ ಮಾಡಿದೆ. 24 ಗಂಟೆಗಳ ಬಳಿಕ ಬೆಂಕಿ ಹತೋಟಿಗೆ ಬಂದಿದೆ. ಇಂದು ಸಂಜೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಥಳಕ್ಕೆ ಭೇಟಿ ಕೊಟ್ಟು ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು.
ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರೊಂದಿಗೆ ಸಮಾಲೋಚಿಸಿದ ಬಳಿಕ ಮಾಧ್ಯಮಗಳ ಜೊತೆ ಮತನಾಡಿದ ಅವರು, ಜನ ವಸತಿ ಪ್ರದೇಶದಲ್ಲಿ ಇಂತಹ ಗೋದಾಮು ಕಟ್ಟಿರೋದು ತಪ್ಪು. ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದ್ದು, ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿದ್ದಾರೆ ಎಂದಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ 3 ಜನರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಫ್ಯಾಕ್ಟರಿಯವರು ಲೈಸೆನ್ಸ್ ತೆಗೆದುಕೊಂಡಿಲ್ಲದೇ ಇರುವುದು ದೊಡ್ಡ ತಪ್ಪು. ಈ ಘಟನೆ ನಡೆಯಲು ಕಾರಣರಾದವರ ಮೇಲೆ ಕೇಸ್ ಬುಕ್ ಮಾಡಲಾಗಿದೆ. ಬಿಬಿಎಂಪಿ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದು ಇಲ್ಲಿ ಕಾಡುವ ಪ್ರಶ್ನೆ ಎಂದರು. ಈ ರೀತಿ ಲೈಸೆನ್ಸ್ ಇಲ್ಲದೆ, ಜನ ವಸತಿ ಪ್ರದೇಶದಲ್ಲಿ ಗೋಡೌನ್, ಕಾರ್ಖಾನೆ ಇದೆ ಅನ್ನೋದರ ಬಗ್ಗೆ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಇಂಡಸ್ಟ್ರಿಯಲ್ ಬೆಲ್ಟ್ನಲ್ಲಿ ಈ ರೀತಿ ಗೋಡೌನ್, ಕಾರ್ಖಾನೆ ಇರುವ ಬಗ್ಗೆ ಮಾಹಿತಿ ಇದೆ. ಅದರ ಬಗ್ಗೆಯೂ ಪರಿಶೀಲನೆ ನಡೆಸಲು ಹೇಳಿದ್ದೇನೆ ಎಂದು ತಿಳಿಸಿದರು
ಅಗ್ನಿ ಶಾಮಕ ದಳದ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದು, ಅವರಿಗೆ ನನ್ನ ಅಭಿನಂದನೆಗಳು. ಮುಂದೆ ಹೀಗಾಗದಂತೆ ನಿಗಾ ವಹಿಸುತ್ತೇವೆ. ನಾಳೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಯಾರ್ಯಾರು ನೇರ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದಾರೋ ಆ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಯಾನಿಟೈಸರ್, ಬುಕ್ ಬೈಂಡ್ ಗಮ್ , ಆಲ್ಕೋಹಾಲ್ ಕಂಟೆಂಟ್ ಇರುವ ಗೋಡೌನ್ ಇದಾಗಿತ್ತು. ಮನೆ ಹಾನಿಯಾಗಿರುವವರು ಈ ಗೋಡೌನ್ ಮಾಲೀಕನೇ ಪರಿಹಾರ ನೀಡಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.