ಬೆಂಗಳೂರು: ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ನಿಗಮ ರಚಿಸಿದ್ದು, ಈಗ ಎಲ್ಲರೂ ತಮಗೂ ನಿಗಮ ರಚಿಸುವಂತೆ ಕೇಳುತ್ತಿದ್ದಾರೆ. ಇದು ಉತ್ತಮ ಸಂಪ್ರದಾಯವಲ್ಲ. ವೀರಶೈವ-ಲಿಂಗಾಯತರಿಗೆ ಈಗ ನಿಗಮ ಮಾಡುವ ಅಗತ್ಯ ಇರಲಿಲ್ಲ. 1.18 ಕೋಟಿ ಲಿಂಗಾಯತರಿದ್ದು, 500 ಕೋಟಿ ರೂ.ನಿಂದ ಒಬ್ಬರಿಗೆ 36 ರೂ. ಸಿಗುತ್ತೆ ಅಷ್ಟೇ. ಅಧ್ಯಕ್ಷರು ಇರುತ್ತಾರೆ, ಗೂಟದ ಕಾರಿನಲ್ಲಿ ಓಡಾಡ್ತಾರೆ. ನಿಗಮದಿಂದ ಏನೂ ಉಪಯೋಗವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಾವು 16% ರಿಸರ್ವೇಷನ್ ಕೇಳಿದ್ದೆವು, ಅದರಿಂದ ಸಮುದಾಯದ ಬಡ ಮಕ್ಕಳಿಗೆ ಉಪಯೋಗ ಆಗುತ್ತದೆ. ನಿಗಮ ಮಾಡೋ ಅವಶ್ಯಕತೆ ಇರಲಿಲ್ಲ. ಸಿಎಂ ಮೇಲೆ ಇದರಿಂದ ಒತ್ತಡ ಬೀಳಲಿದೆ. ಜೈನರು, ಕ್ರಿಶ್ಚಿಯನ್ನರು ಎಲ್ಲರೂ ನಿಗಮ ರಚಿಸುವಂತೆ ಕೇಳ್ತಾರೆ ಎಂದರು. ಸಿಎಂ ಲಿಂಗಾಯತ ಓಲೈಕೆ ಪ್ರಯತ್ನವೇ ಎಂಬ ವಿಚಾರವಾಗಿ, ಇದರಿಂದ ಓಲೈಕೆಯೇನೂ ಆಗಲ್ಲ ಎಂದರು.
ನಾಯಕತ್ವ ಬದಲಾವಣೆ ಏನೂ ಆಗಲ್ಲ:
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಏನು ಆಗುವುದಿಲ್ಲ. ಬದಲಾವಣೆಯಾದರೆ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ. ಮುಂದಿನ ಮೂರು ವರ್ಷ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಲಿಂಗಾಯತ ನಿಗಮ ರಚನೆಗೂ ನಾಯಕತ್ವ ಬದಲಾವಣೆ ವಿಚಾರಕ್ಕೂ ಸಂಬಂಧ ಇಲ್ಲ. ನಿಗಮದಿಂದ ಸಮುದಾಯಕ್ಕೆ ಏನೂ ಒಳ್ಳೆಯದು ಆಗಲ್ಲ ಎಂದರು.
ಇದನ್ನು ಓದಿ: ಮೂಡುಬಿದಿರೆ: ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರ ಸಾವು