ಬೆಂಗಳೂರು: ನಾಳೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಗೋವಿಂದ ಕಾರಜೋಳ, ವಿಧಾನ ಪರಿಷತ್ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಸಾತ್ ನೀಡಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಹೊರಟ್ಟಿ, ನನಗೆ ಇದೊಂದು ಅವಿಸ್ಮರಣೀಯ ದಿನ. ನಾನು ನಾಮಪತ್ರ ಸಲ್ಲಿಸುವಾಗ ಸಿಎಂ, ಯಡಿಯೂರಪ್ಪ, ಅಶೋಕ ಸೇರಿ ಸಚಿವರು ಬಂದಿದ್ದಾರೆ. ಈ ಹಿಂದೆ ನಾನು ಬಹಳ ಸಲ ನಾಮಪತ್ರ ಸಲ್ಲಿಸಿದ್ದೇನೆ. ಆಗ ಸಿಎಂ ಸೇರಿ ಇಷ್ಟು ಜನ ಬಂದಿರಲಿಲ್ಲ. ಹಿಂದೆ ರಾಮಕೃಷ್ಣ ಹೆಗಡೆ ಅವರನ್ನು ಬಿಟ್ಟರೆ ಯಾರೂ ಬಂದಿರಲಿಲ್ಲ. ಆದರೆ ಇಂದು ನಮ್ಮ ಪಕ್ಷದ ನಾಯಕರೆಲ್ಲರೂ ಬಂದಿದ್ದರು. ನಾನು ಅತ್ಯಂತ ವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಎಂದೆಂದೂ ದುರುಪಯೋಗ ಮಾಡಲ್ಲ. ನನ್ನ ಮೇಲೆ ಇಟ್ಟಿರುವ ವಿಶ್ವಾಸ ಕಾಯ್ದುಕೊಂಡು, ಪಕ್ಷಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಕೆಲಸ ಮಾಡಲಿದ್ದೇನೆ ಎಂದರು.
ಸಭಾಪತಿ ಸ್ಥಾನದಲ್ಲಿ ಕುಳಿತಾಗ ನ್ಯಾಯವಾಗಿ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತೇನೆ ಎಂದ ಹೊರಟ್ಟಿ, ತಡವಾಗಿ ಸಭಾಪತಿ ಸ್ಥಾನ ಸಿಕ್ಕಿತಾ? ಸಭಾಪತಿ ಸ್ಥಾನಕ್ಕೆ ಹೋರಾಟವನ್ನೇ ಮಾಡಬೇಕಾಯ್ತ ಎಂಬ ಪ್ರಶ್ನೆಗಳು ಬರುತ್ತಿವೆ. ಆದರೆ ಅವರವರ ಸಮಸ್ಯೆಗಳು ಇರುತ್ತವೆ. ಅದಕ್ಕೆ ನಾನೇನೂ ಹೇಳುವುದಿಲ್ಲ. ಒಟ್ಟಾರೆ ಕೊಟ್ಟಿರುವ ಮಾತಿನಂತೆ ನಡೆದುಕೊಂಡಿದ್ದಾರೆ. ತಾಂತ್ರಿಕ ತೊಂದರೆಗಳು ಇರುತ್ತವೆ. ಸರ್ಕಾರದಲ್ಲಿ, ಪಕ್ಷದಲ್ಲಿ ತೊಂದರೆಗಳು ಇರುತ್ತವೆ, ಅವೆಲ್ಲವನ್ನೂ ಸರಿ ಪಡಿಸಿಕೊಳ್ಳಲು ಸಮಯ ಬೇಕಾಗುತ್ತದೆ. ನಾನು ಹೆಂಗಿದ್ದೇನೊ ಹಾಗೆ ಇದ್ದೇನೆ, ನಂಗೆ ಅತೃಪ್ತಿ ಆಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಸಭಾಪತಿ ಅಭ್ಯರ್ಥಿ ಆಯ್ಕೆ ವಿಚಾರ: ನೀವು ಅಭ್ಯರ್ಥಿಗಳಾಗಿದ್ದೀರಿ, ಬಿಜೆಪಿಯಿಂದ ಬಸವರಾಜ ಹೊರಟ್ಟಿಗೆ ಮಾಹಿತಿ ಸಂದೇಶ