ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಜೆಪಿ ವೀಕ್ಷಕರು, ನಿರ್ಗಮಿಸಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಸವರಾಜ ಬೊಮ್ಮಾಯಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಹಸಿರುಶಾಲು: ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಹಸಿರುಶಾಲು ಧರಿಸಿ ರೈತ ನಾಯಕನಂತೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಆದರೆ ಅವರ ನಂತರ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಬೊಮ್ಮಾಯಿ ಆರ್.ಎಸ್.ಎಸ್ ಮತ್ತು ಹಿಂದುತ್ವದ ಪ್ರತಿಬಿಂಬಕವಾಗಿರುವ ಕೇಸರಿ ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಹೈಕಮಾಂಡ್ ನಾಯಕರ ಮತ್ತು ಆರ್.ಎಸ್.ಎಸ್ ನಾಯಕರ ವಿಶ್ವಾಸಕ್ಕೆ ಪಡೆಯುವ ಗುರುತಾಗಿ ಈ ರೀತ ಕೇಸರಿ ಶಾಲು ಧರಿಸಿದ್ದರಾ ಎನ್ನುವ ಪ್ರಶ್ನೆ ಮೂಡಿದೆ.
ಮೂರು ನಿಮಿಷದಲ್ಲಿ ಮುಗಿದ ಕಾರ್ಯಕ್ರಮ: 11 ಗಂಟೆಗೆ ಶುರುವಾದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ರಾಷ್ಟ್ರ ಗೀತೆಯೊಂದಿಗೆ ಆರಂಭಗೊಂಡು ಪ್ರಮಾಣ ವಚನ ಬೋಧನೆ ನಂತರ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ನೂತನ ಸಿಎಂಗೆ ರಾಜ್ಯಪಾಲರು, ನಿರ್ಗಮಿಸಿ ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ಶುಭ ಕೋರಿದರು. ಕೇವಲ ಮೂರು ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯಗೊಂಡಿತು.
ಅಪ್ಪ ಬೊಮ್ಮಾಯಿ ಜೊತೆ ಬಸವರಾಜ: ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಈಗಾಗಲೇ ಸೇವೆ ಸಲ್ಲಿಸಿದ್ದಾರೆ. 1980ರ ದಶಕದಲ್ಲಿ ಸಂಘ ಪರಿವಾರದಿಂದ ಬಂದ ಅವರು ಸಿಎಂ ಆಗಿ ಆಯ್ಕೆಯಾಗಿದ್ದರು. ಇದೀಗ ಅವರ ಮಗ ಬಸವರಾಜ ಬೊಮ್ಮಾಯಿ ಕೂಡ ರಾಜ್ಯದ ನೂತನ ಸಿಎಂ ಆಗಿದ್ದಾರೆ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಡೆದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ.
ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಜೋಡಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಅದೇ ರೀತಿ ಎಸ್.ಆರ್ ಬೊಮ್ಮಾಯಿ ಹಾಗೂ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವ ಮೂಲಕ ಇತಿಹಾಸ ಮತ್ತೊಮ್ಮೆ ಮರುಕಳಿಸುವಂತೆ ಮಾಡಿದ್ದಾರೆ. ಎಸ್.ಆರ್ ಬೊಮ್ಮಾಯಿ ಈ ಹಿಂದೆ ಹುಬ್ಬಳ್ಳಿ ಪ್ರಾಂತ್ಯದಿಂದ ಪ್ರತಿನಿಧಿಸಿ ಮುಖ್ಯಮಂತ್ರಿಯಾಗಿದ್ದರು. ಆದರೆ ಆರು ತಿಂಗಳ ಕಾಲ ಮಾತ್ರ ಸಿಎಂ ಆಗಿದ್ದರೂ ಎಂಬುದು ಗಮನಾರ್ಹ ಸಂಗತಿ.
2012ರಲ್ಲಿ ಬಿಎಸ್ವೈ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ಬಸವರಾಜ ಬೊಮ್ಮಾಯಿ ಅಲ್ಲಿಗೆ ಹೋಗಲಿಲ್ಲ. ಆದರೆ ಬಿಎಸ್ವೈ ಜೊತೆ ಯಾವುದೇ ರೀತಿಯ ದ್ವೇಷ ಇಟ್ಟುಕೊಳ್ಳಲಿಲ್ಲ. ಇದೇ ಕಾರಣಕ್ಕಾಗಿ 2019ರಲ್ಲಿ ಯಡಿಯೂರಪ್ಪ ಸರ್ಕಾರ ಆಡಳಿತಕ್ಕೆ ಬಂದಾಗ ಬೊಮ್ಮಾಯಿ ಅವರನ್ನು ಹತ್ತಿರದಲ್ಲಿಟ್ಟುಕೊಂಡಿದ್ದರು. ಇದರ ಫಲವಾಗಿ ಇದೀಗ ಅವರಿಗೆ ಸಿಎಂ ಪಟ್ಟ ಒಲಿದು ಬಂದಿದೆ.