ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿನ ಸತ್ಯಾಸತ್ಯತೆ ಹೊರ ಬರುವುದು ಹಾಗೂ ಅಪರಾಧಿಗಳಿಗೆ ಶಿಕ್ಷೆ ಆಗುವುದು ಕಾಂಗ್ರೆಸ್ನವರಿಗೆ ಬೇಕಾಗಿಲ್ಲ. ಹೀಗಾಗಿ, ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಡಿ ವಿಚಾರ ಮುಂದಿಟ್ಟುಕೊಂಡು ಸದನದ ಬಾವಿಗಿಳಿದು ಧರಣಿ ನಡೆಸುತ್ತಿರುವ ಕಾಂಗ್ರೆಸ್ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದವರೇನು ಸತ್ಯ ಹರಿಶ್ಚಂದ್ರರಲ್ಲ. 2016ರಲ್ಲಿ ಅಂದಿನ ಸಚಿವ ಮೇಟಿ ಪ್ರಕರಣದಲ್ಲಿ ಏನಾಯ್ತು? ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಮಾಧ್ಯಮದಲ್ಲಿ ಪ್ರಸಾರವಾಗಿರುವ ಸಿಡಿಯ ಸತ್ಯಾಸತ್ಯತೆ ಅರಿಯಲು ಮೇಟಿ ಪ್ರಕರಣವನ್ನು ಸಿಐಡಿಗೆ ವಹಿಸಲಾಯಿತು.
ವಿಚಾರಣೆ ಮಾಡಿ ವರದಿ ಕೊಡಿ ಎಂದು ಸೂಚಿಸಲಾಗಿತ್ತು. ಆಗ ಮೇಟಿ ಪ್ರಕರಣದ ಕುರಿತು ಯಾವ ಪೊಲೀಸ್ ಠಾಣೆಯಲ್ಲಿಯೂ ಎಫ್ಐಆರ್ ದಾಖಲಾಗಿರಲಿಲ್ಲ. ವಿಚಾರಣೆಗೆ ಟರ್ಮ್ಸ್ ಮತ್ತು ರೆಫರೆನ್ಸ್ ಇರಲಿಲ್ಲ. ಆಗ ರಾಮಲಿಂಗಾರೆಡ್ಡಿ ಗೃಹ ಸಚಿವರಾಗಿದ್ದರು. ಅವರೂ ಇದನ್ನೇ ಮಾಡಿದ್ದಾರೆ. ಆದರೆ, ಈಗ ಜಾರಕಿಹೊಳಿ ಪ್ರಕರಣದಲ್ಲಿ ಎಫ್ಐಆರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಓದಿ : ಸಿಡಿ ಪ್ರಕರಣ.. ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಮಾಜಿ ಪತ್ರಕರ್ತ
ಮೇಟಿ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನೇ ತನಿಖಾಧಿಕಾರಿ ಮತ್ತು ವಿಚಾರಣೆಗೆ ನೇಮಿಸಲಾಗಿತ್ತು. ನಾವು ಎಸ್ಐಟಿ ರಚಿಸಿದ್ದೇವೆ. ವಿಚಾರಣೆಗಿಂತ ಮೊದಲೇ ಪ್ರಕರಣದಲ್ಲಿ ಮೇಟಿ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಆ ಸಂದರ್ಭದಲ್ಲಿ ಹೊರಡಿಸಲಾದ ಆದೇಶ ಪ್ರತಿಗಳನ್ನು ಮಾಧ್ಯಮಗಳಿಗೆ ತೋರಿಸಿದರು.
ಮೇಟಿ ಸಿಡಿಯಲ್ಲಿ ಇದ್ದ ಮಹಿಳೆಯ ಗತಿ ಏನಾಯಿತು? ಆಗ ಇದೇ ಕಾಂಗ್ರೆಸ್ ಶಾಸಕರು ಮತ್ತು ಸರ್ಕಾರ ಆ ಮಹಿಳೆಯ ವಿರುದ್ಧ ನಿಂತಿತ್ತು. ಹೀಗಾಗಿ, ಕಾಂಗ್ರೆಸ್ ಪಕ್ಷದಿಂದ ನಾವು ಪಾಠ ಕಲಿಯಬೇಕಿಲ್ಲ. ಜನರೇ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಧಿಕ್ಕಾರ ಹಾಕಲಿದ್ದಾರೆ ಎಂದು ಹೇಳಿದರು.