ಬೆಂಗಳೂರು: ಸಿವಿಲ್ ಇಂಜಿನಿಯರ್ಗಳನ್ನು ಪ್ರತ್ಯೇಕವಾಗಿ ಮುಖ್ಯ ಇಂಜಿನಿಯರ್ಗಳನ್ನಾಗಿ ನೇಮಕ ಮಾಡಲು ಬೆಂಗಳೂರು ಜಲ ಮಂಡಳಿಯಲ್ಲಿ ಯಾವುದೇ ನಿಯಮಾವಳಿಗಳಿಲ್ಲ. ಸೂಪರ್ ನ್ಯೂಮರಿ ಹುದ್ದೆ ಸೃಷ್ಟಿ ಹಾಗೂ ನಿಯಮಾವಳಿಗೆ ಬದಲಾವಣೆ ತರುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಲ ಮಂಡಳಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದವರು ಮಾಡಬೇಕಾದ ಕೆಲಸವನ್ನು, ಎಲೆಕ್ಟ್ರಿಕಲ್ಸ್ ಮಾಡಿದವರಿಂದ ಮಾಡಿಸುತ್ತಿರುವುದರ ಕುರಿತ ಪ್ರಶ್ನೆಯನ್ನು ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದರು. ಅದಕ್ಕೆ ಸಿಎಂ ಯಡಿಯೂರಪ್ಪ ಪರವಾಗಿ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ಜಲ ಮಂಡಳಿ ಅತ್ಯಂತ ಪ್ರಮುಖ ಸಂಸ್ಥೆಯಾಗಿದೆ. ಕುಡಿಯುವ ನೀರು ಸರಬರಾಜು, ತ್ಯಾಜ್ಯ ನೀರು ಶುದ್ಧೀಕರಣ ಮಾಡುವ ಘಟಕ ನಿರ್ವಹಣೆ ಮಾಡುತ್ತಿದೆ. ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ. ಆದರೂ ಜಲ ಮಂಡಳಿ ಕಾರ್ಯವೈಖರಿ ಬಗ್ಗೆ ಹಸಿರು ನ್ಯಾಯಾಧಿಕರಣ ಕೆಲ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ನ್ಯಾಯಾಧಿಕರಣದ ಆದೇಶದ ನಂತರ ಐದು ಸಣ್ಣ ಪ್ರಮಾಣದ ನೀರು ಸಂಸ್ಕರಣಾ ಘಟಕ ಕಾಮಗಾರಿ ಆರಂಭ ಮಾಡಿದ್ದೇವೆ ಎಂದರು.
ಇಂಜಿನಿಯರಿಂಗ್ ವೃಂದ ಕುರಿತು ಹಳೆಯ ಸಿ ಅಂಡ್ ಆರ್ ನಿಯಮದಂತೆ ಬಡ್ತಿ ನೀಡಲಾಗುತ್ತದೆ. ಆದರೂ ಜಲ ಮಂಡಳಿಯಲ್ಲಿ ಸಿವಿಲ್ ಇಂಜಿನಿಯರ್ ಕೆಲಸ ಸಿವಿಲ್ ಇಂಜಿನಿಯರ್ಗಳೇ ಮಾಡಬೇಕು. ಎಲೆಕ್ಟ್ರಿಕಲ್ ಇಂಜಿನಿಯರ್ ಮಾಡಲು ಸಾಧ್ಯವಿಲ್ಲ. ನಿಯಮ ಬದಲಿಸಬೇಕಿದೆ. ಸಿಎಂ ಗಮನದಲ್ಲೂ ಇದು ಇದೆ. ನಿಯಮಕ್ಕೆ ತಿದ್ದುಪಡಿ ಮಾಡಿದಲ್ಲಿ ಮಾತ್ರ ಮೂರೂ ವೃಂದದಲ್ಲಿ ಮುಖ್ಯ ಇಂಜಿನಿಯರ್ ನೇಮಕ ಮಾಡಲು ಸಾಧ್ಯ. ಸೂಪರ್ ನ್ಯೂಮರಿ ಹುದ್ದೆ ಸೃಷ್ಟಿ ಸೇರಿದಂತೆ ಏನೆಲ್ಲಾ ಕ್ರಮ ಸಾಧ್ಯವೋ ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
72 ಗಂಟೆಯಲ್ಲಿ ವಿದ್ಯುತ್ ಪರಿವರ್ತಕ ಬದಲು: ಗ್ರಾಮಾಂತರ ಪ್ರದೇಶದಲ್ಲಿ ವಿಫಲಗೊಂಡ ರೈತರ ಪಂಪ್ ಸೆಟ್ನ ಪರಿವರ್ತಕಗಳನ್ನು 72 ಗಂಟೆಯೊಳಗೆ ಬದಲಾಯಿಸಿಕೊಡುವಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚನೆ ನೀಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಅಪ್ಪಾಜಿಗೌಡರ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಪರವಾಗಿ ಉತ್ತರಿಸಿದ ಗೃಹ ಸಚಿವರು, 72 ಗಂಟೆಯಲ್ಲಿ ಪರಿವರ್ತಕ(ಟಿಸಿ) ಬದಲಾಯಿಸಿಕೊಡಲಾಗುತ್ತದೆ. ಕೆಲವೊಮ್ಮೆ ತಾಂತ್ರಿಕ ಕಾರಣ, ಪರಿಕರಗಳ ಕೊರತೆ ಇದ್ದಾಗ ವಿಳಂಬವಾಗಬಹುದು. ಆದರೆ ಸಾಮಾನ್ಯವಾಗಿ 72 ಗಂಟೆಯೊಳಗೆ ಟಿಸಿ ಬದಲಿಸಿಕೊಡಲಾಗುತ್ತದೆ ಎಂದರು.
ಇದಕ್ಕೆ ಅಪ್ಪಾಜಿಗೌಡ ಆಕ್ಷೇಪ ವ್ಯಕ್ತಪಡಿಸಿದರು. ಸಾಕಷ್ಟು ವಿಳಂಬ ಮಾಡಲಾಗುತ್ತಿದೆ ಎಂದರು. ಇದಕ್ಕೆ ಶ್ರೀಕಂಠೇಗೌಡ ಕೂಡ ಸಾಥ್ ನೀಡಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಿ.ಎಂ.ಇಬ್ರಾಹಿಂ, ಸದಸ್ಯರು ಹೇಳುತ್ತಿರುವುದನ್ನು ತಪ್ಪು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರದ ಉತ್ತರದಲ್ಲಿ ಇದು ಸ್ಪಷ್ಟವಾಗಿದೆ. ಇದು ಸದಸ್ಯರ ಗೌರವದ ಪ್ರಶ್ನೆ. ಹಾಗಾಗಿ ಇದನ್ನು ಹಕ್ಕು ಚ್ಯುತಿ ಸಮಿತಿಗೆ ವಹಿಸುವಂತೆ ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇದನ್ನು ಹಕ್ಕು ಚ್ಯುತಿ ಸಮಿತಿಗೆ ವಹಿಸಲು ಸಾಧ್ಯವಿಲ್ಲ. ಏನಾಗಿದೆ ಎಂದು ಸಂಪೂರ್ಣವಾಗಿ ಪರಿಶೀಲನೆ ನಡೆಸಲು ನಿರ್ದೇಶನ ನೀಡಲಾಗುತ್ತದೆ. ತನಿಖೆ ಮಾಡಿಸಿ ಪರಿಶೀಲನೆ ಮಾಡಿಸಲಾಗುತ್ತದೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಿಎಂ ಉಸ್ತುವಾರಿಯಲ್ಲಿ ಬೆಂಗಳೂರು ಅನಾಥವಾಗಿದೆ: ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಬೆಂಗಳೂರು ಉಸ್ತುವಾರಿ ಸಿಎಂ ಯಡಿಯೂರಪ್ಪ ಅವರಿಗೆ ಸಮಯವಿಲ್ಲದಂತಾಗಿದೆ. ಹೀಗಾಗಿ ಬೆಂಗಳೂರು ಅನಾಥವಾಗಿದೆ. ಕುಖ್ಯಾತಿಗೆ ಹೆಸರಾಗಿದೆ. ಬಿಬಿಎಂಪಿಯಲ್ಲಿ ದೊಡ್ಡ ಮಾಫಿಯಾವೇ ಇದೆ. ಘನ ತ್ಯಾಜ್ಯ ವಿಷಯದಲ್ಲಿ ಗಾರ್ಬೇಜ್ ಸಿಟಿಯಾಗಿದೆ. ವೈಟ್ ಟಾಪಿಂಗ್, ಫುಟ್ಪಾತ್ ನಿರ್ಮಾಣಕ್ಕೆ ಇಡೀ ನಗರವನ್ನೇ ಅಗೆದು ಹಾಕಿದೆ. ಇದರಿಂದ ಜನಸಾಮಾನ್ಯರು ನರಳುತ್ತಿದ್ದಾರೆ. ಮಾಫಿಯಾ ನಿಯಂತ್ರಣದಲ್ಲಿ ಗುತ್ತಿಗೆದಾರರು ಇರುವ ವ್ಯವಸ್ಥೆಯನ್ನು ನಿಯಂತ್ರಣ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇನ್ನು ಸಿಎಂ ಪರ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೀದಿಬದಿ ಹಾಕುವ ಕಸದ ಸಮಸ್ಯೆಗೆ ಸರ್ವೇ ಮಾಡಿ 2370 ಬ್ಲಾಕ್ ಸ್ಪಾಟ್ ಗುರುತಿಸಿ 600 ತೆರವು ಮಾಡಿದ್ದೇವೆ. ಎರಡು ಮೂರು ತಿಂಗಳಿನಲ್ಲಿ ಎಲ್ಲಾ ಕ್ಲೀಯರ್ ಮಾಡುತ್ತೇವೆ. 4000 ಟನ್ ಕಸವನ್ನು ಮನೆ ಮನೆಗೆ ಹೋಗಿ ಸಂಗ್ರಹ ಮಾಡಲಾಗುತ್ತಿದೆ. ಕಮರ್ಷಿಯಲ್ ಸೇರಿ 6500 ಟನ್ ಕಸ ಆಗಲಿದೆ. ಇದರ ನಿರ್ವಹಣೆ ಸವಾಲಾಗಿದೆ. ಇದರ ಸಂಪೂರ್ಣ ನಿಯಂತ್ರಣ ಮಾಡಲು, ವೈಜ್ಞಾನಿಕವಾಗಿ ಏನು ಬೇಕೋ ಅದನ್ನು ಮಾಡಲಾಗುತ್ತಿದೆ. ಗುತ್ತಿಗೆದಾರರ ನಿಯಂತ್ರಣಕ್ಕೆ ಏನೆಲ್ಲಾ ಅಗತ್ಯವಿದೆಯೋ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.