ಬೆಂಗಳೂರು : ದಕ್ಷಿಣ ಭಾರತದಲ್ಲಿ ಕಮಲ ಅರಳಿದ ಮೊದಲ ರಾಜ್ಯವಾದ ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಒಂದು ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಬಸವರಾಜ ಬೊಮ್ಮಾಯಿ ಅವರದ್ದಾಗಿದೆ.
ರಾಜ್ಯದಲ್ಲಿ ಈವರೆಗೆ ನಾಲ್ವರು ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದಾರೆ. ಯಡಿಯೂರಪ್ಪ ಮೊದಲ ಬಿಜೆಪಿ ಮುಖ್ಯಮಂತ್ರಿಯಾದರೆ ಡಿ.ವಿ. ಸದಾನಂದಗೌಡ ಎರಡನೇ ಸಿಎಂ, ಜಗದೀಶ್ ಶೆಟ್ಟರ್ ಮೂರನೇ ಮುಖ್ಯಮಂತ್ರಿಯಾಗಿದ್ದು, ಪ್ರಸ್ತುತ ಇರುವ ಬಸವರಾಜ ಬೊಮ್ಮಾಯಿ ನಾಲ್ಕನೇ ಮುಖ್ಯಮಂತ್ರಿಯಾಗಿದ್ದಾರೆ. ಈ ನಾಲ್ವರು ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ಹೊರತುಪಡಿಸಿದರೆ ಒಂದು ವರ್ಷ ಪೂರ್ಣಗೊಳಿಸಿದ ಮೊದಲ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ರಾಜ್ಯ : 2006 ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಅಧಿಕಾರ ಹಸ್ತಾಂತರ ಮಾಡದ ಜೆಡಿಎಸ್ ನಡೆ ಖಂಡಿಸಿ ಮೈತ್ರಿ ಕಡಿದುಕೊಂಡಿತು. ಪರಿಣಾಮ 2008 ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದು ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂತು. ಆ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಯೂ ಕರ್ನಾಟಕದ್ದಾಯಿತು.
2008 ರ ಚುನಾವಣೆಯಲ್ಲಿ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ಆದ ಬಿ.ಎಸ್. ಯಡಿಯೂರಪ್ಪ ಬಂಡಾಯದಂತಹ ಸಾಕಷ್ಟು ಅಡೆತಡೆಗಳ ನಡುವೆ ಮೂರೂವರೆ ವರ್ಷ ಆಡಳಿತ ನಡೆಸಿದರು. ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಹೈಕಮಾಂಡ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ಬಿಎಸ್ವೈ ತಮ್ಮ ಉತ್ತರಾಧಿಕಾರಿಯಾಗಿ 2011 ರ ಆಗಸ್ಟ್ ನಲ್ಲಿ ಡಿ.ವಿ ಸದಾನಂದಗೌಡರನ್ನು ಆಯ್ಕೆ ಮಾಡಿದರು. ಆದರೆ ಸದಾನಂದಗೌಡರು ಆಗಸ್ಟ್ 5 ರಂದು ಪ್ರಮಾಣವಚನ ಸ್ವೀಕಾರ ಮಾಡಿ ಕೇವಲ 11 ತಿಂಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. 2012 ರ ಜುಲೈ 12 ರಂದು ಯಡಿಯೂರಪ್ಪ ಅಪೇಕ್ಷೆಯಂತೆ ನಡೆದುಕೊಳ್ಳದ ಆರೋಪದಿಂದ ಹುದ್ದೆ ಕಳೆದುಕೊಂಡರು.
ಸದಾನಂದ ಗೌಡರ ಆಯ್ಕೆ ವೇಳೆ ಹೈಕಮಾಂಡ್ ಶಿಫಾರಸು ಮಾಡಿದ್ದ ಜಗದೀಶ್ ಶೆಟ್ಟರ್ಗೆ ಮುಖ್ಯಮಂತ್ರಿ ಸ್ಥಾನ ಸಿಗದಂತೆ ಆಪ್ತರ ಮೂಲಕ ನೋಡಿಕೊಂಡಿದ್ದ ಯಡಿಯೂರಪ್ಪ ನಂತರ ಅದೇ ಜಗದೀಶ್ ಶೆಟ್ಟರ್ ಅವರನ್ನು ಸದಾನಂದ ಗೌಡರ ನಂತರ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆದರೆ ಜಗದೀಶ್ ಶೆಟ್ಟರ್ ಗೆ ಇದ್ದದ್ದು ಕೇವಲ 10 ತಿಂಗಳು ಅಧಿಕಾರಾವಧಿ ಮಾತ್ರ. 2012 ರ ಜುಲೈ 12 ರಂದು ಪ್ರಮಾಣವಚನ ಸ್ವೀಕರಿಸಿದ್ದ ಶೆಟ್ಟರ್ 2013 ರ ಮೇ 13 ಕ್ಕೆ ಅಧಿಕಾರಾವಧಿ ಪೂರ್ಣಗೊಳಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾರಣಕ್ಕೆ ಶೆಟ್ಟರ್ ಗೆ ಮುಂದುವರೆಯುವ ಅವಕಾಶ ಲಭ್ಯವಾಗಲಿಲ್ಲ. ಹಾಗಾಗಿ ಈ ಇಬ್ಬರು ಮುಖ್ಯಮಂತ್ರಿಗಳಿಗೆ ವರ್ಷ ಪೂರ್ಣಗೊಳಿಸುವ, ವರ್ಷದ ಸಾಧನಾ ಕಾರ್ಯಕ್ರಮ ಮಾಡುವ ಅವಕಾಶ ಸಿಗಲಿಲ್ಲ.
2019 ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ ಎರಡನೇ ಬಾರಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಕೇವಲ ಎರಡು ವರ್ಷಕ್ಕೆ ರಾಜೀನಾಮೆ ನೀಡಿದರು. 75 ವರ್ಷ ವಯೋಮಿತಿಯ ಅಲಿಖಿತ ನಿಯಮವನ್ನು ಹೈಕಮಾಂಡ್ ಜಾರಿಗೊಳಿಸಿದ್ದು, ಅದರಿಂದ ವಿನಾಯಿತಿ ಪಡೆದು ಆಡಳಿತ ನಡೆಸಿದ ಏಕೈಕ ನಾಯಕರಾದ ಯಡಿಯೂರಪ್ಪ ನಂತರ ಹೈಕಮಾಂಡ್ ಸೂಚನೆಯಂತೆ ಎರಡು ವರ್ಷದ ಸಾಧನಾ ಸಮಾವೇಶ ನಡೆಸಿ ಅಧಿಕಾರದಿಂದ ನಿರ್ಗಮಿಸಿದರು.
ಮರುಕಳಿಸದ 2008ರ ಸ್ಥಿತಿ : ಬಿಎಸ್ವೈ ರಾಜೀನಾಮೆ ನಂತರ 2021ರ ಜುಲೈ 28 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಬಸವರಾಜ ಬೊಮ್ಮಾಯಿ ಕೂಡ ವರ್ಷ ಮುಗಿಸುವುದಿಲ್ಲ ಎನ್ನಲಾಗ್ತಿತ್ತು. ಆರು ತಿಂಗಳಿಗೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ. 2008 ರ ಸ್ಥಿತಿ ಮತ್ತೆ ಮರುಕಳಿಸಲಿದೆ, ಈ ಬಾರಿಯೂ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ಕಾಣಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಯಡಿಯೂರಪ್ಪ ನಾಯಕತ್ವ ಬದಲಾದ ನಂತರ ಬೊಮ್ಮಾಯಿ ಅಧಿಕಾರಕ್ಕೆ ಬಂದ ದಿನದಿಂದಲೂ ನಾಯಕತ್ವ ಬದಲಾವಣೆ ವದಂತಿ ಮುಂದುವರೆದಿದೆ. ಮುಖ್ಯಮಂತ್ರಿ ಬದಲಾವಣೆ ಗುಸು ಗುಸು ನಡುವೆಯೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳಿಸುತ್ತಿದ್ದಾರೆ. ಜುಲೈ 28 ರಂದು ದೊಡ್ಡ ಬಳ್ಳಾಪುರದಲ್ಲಿ ವರ್ಷದ ಸಾಧನಾ ಸಮಾವೇಶವನ್ನು ಆಯೋಜನೆ ಮಾಡಿದ್ದಾರೆ.
ಯಡಿಯೂರಪ್ಪ ಬಳಿಕ ವರ್ಷ ಪೂರೈಸಿದ ಮೊದಲ ಸಿಎಂ ಬೊಮ್ಮಾಯಿ : ರಾಜ್ಯದಲ್ಲಿ ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ವರ್ಷ ಪೂರ್ಣಗೊಳಿಸಿದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗುತ್ತಿದ್ದಾರೆ. ವರ್ಷದ ಸಾಧನಾ ಸಮಾವೇಶ ಮಾಡುತ್ತಿರುವ ಮೊದಲ ಮುಖ್ಯಮಂತ್ರಿಯೂ ಆಗುತ್ತಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಮೊದಲ ಬಾರಿ ವಾರದ ಸಿಎಂ, ಎರಡನೇ ಬಾರಿ ಮೂರೂವರೆ ವರ್ಷದ ಸಿಎಂ, ಮೂರನೇ ಬಾರಿ ಆರು ದಿನದ ಸಿಎಂ, ನಾಲ್ಕನೇ ಬಾರಿ ಎರಡು ವರ್ಷದ ಸಿಎಂ ಆಗಿದ್ದು, ಬಿಎಸ್ವೈ ನಂತರ ಬೊಮ್ಮಾಯಿ ವರ್ಷ ಮುಗಿಸುತ್ತಿರುವ ಮೊದಲ ಬಿಜೆಪಿ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಪಡೆದುಕೊಳ್ಳುತ್ತಿದ್ದಾರೆ.
ಓದಿ : ಶಾಸಕ ಎಸ್.ಆರ್.ವಿಶ್ವನಾಥ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಿಎಂ ಬೊಮ್ಮಾಯಿ