ಶ್ರೀನಗರ: ಕಣಿವೆ ನಾಡಿನಲ್ಲಿ ಉಗ್ರರನ್ನು ಹತ್ತಿಕ್ಕುವ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರೆದಿದೆ. ಕುಪ್ವಾರ ಮತ್ತು ಬಂಡಿಪೊರಾದಲ್ಲಿ ಇಂದು ನಡೆದ ಪ್ರತ್ಯೇಕ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕುಪ್ವಾರದಲ್ಲಿ ಭಯೋತ್ಪಾದಕರು ಅಡಗಿರುವ ಕುರಿತು ಗುಪ್ತಚರ ಇಲಾಖೆ ನೀಡಿದ ನಿರ್ದಿಷ್ಟ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಉತ್ತರ ಕಾಶ್ಮೀರ ಜಿಲ್ಲೆಯಲ್ಲಿನ ಲೊಲಬ್ನ ಮಾರ್ಗಿ ಪ್ರದೇಶದಲ್ಲಿ ಮಂಗಳವಾರ ರಾತ್ರಿಯಿಂದಲೇ ಶೋಧ ಕಾರ್ಯ ಆರಂಭವಾಗಿತ್ತು.
ಭದ್ರತಾ ಪಡೆಯ ಆಗಮನದ ಸುಳಿವರಿತ ಭಯೋತ್ಪಾದಕರು ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಸೇನೆಯೂ ದಾಳಿ ನಡೆಸಿದೆ. ಈ ವೇಳೆ ಓರ್ವ ಉಗ್ರನ ಹತ್ಯೆಯಾಗಿದೆ. ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಗುಂಡಿನ ಚಕಮಕಿ ನೆರೆಯ ಬಂಡಿಪೊರಾದಲ್ಲಿ ನಡೆದಿದೆ. ಇಲ್ಲಿನ ಕೈತ್ಸನ್ ಅರಣ್ಯ ಪ್ರದೇಶದಲ್ಲಿ ಗುಪ್ತಚರ ಮಾಹಿತಿ ಮೇರೆಗೆ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನೆ ಜಂಟಿ ಶೋಧ ಕಾರ್ಯ ನಡೆಸಿದೆ. ಈ ಎನ್ಕೌಂಟರ್ನಲ್ಲಿ ಒಬ್ಬ ಉಗ್ರನನ್ನು ಸದೆಬಡಿಯಲಾಗಿದ್ದು, ಮತ್ತೊಬ್ಬನನ್ನು ಜೀವಂತ ಸೆರೆ ಹಿಡಿಯಲಾಗಿದೆ. ಈ ಉಗ್ರರ ಗುರುತು ಬಹಿರಂಗವಾಗಿಲ್ಲ.
ಈ ಕುರಿತು ಪೋಸ್ಟ್ ಮಾಡಿರುವ ಚಿನಾರ್ ಕಾರ್ಪ್ಸ್, ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಕೈತ್ಸನ್ ಅರಣ್ಯದಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್ಪಿಎಫ್ ಕಾರ್ಯಾಚರಣೆಗೆ ಮುಂದಾಯಿತು. ಬಂಡಿಪೊರಾದ ಕೈತ್ಸನ್ ಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಾಲ್ಕು ಎನ್ಕೌಂಟರ್ಗಳು ನಡೆದಿವೆ. ನವೆಂಬರ್ 2ರಂದು ಅನಂತ್ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅಕ್ಟೋಬರ್ 29ರಂದು ಅಖ್ನೋರ್ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಸದೆಬಡಿದಿತ್ತು.
ಇದನ್ನೂ ಓದಿ: ಬಿಜೆಪಿ ಮುಖಂಡನ ಶಾಲೆಯ ಪ್ರಾಂಶುಪಾಲರನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು: ದೃಶ್ಯ ಸಿಸಿಟಿವಿಯಲ್ಲಿ ಸೆರೆ