ಹೊಸಕೋಟೆ: ಬೆಂಗಳೂರು ಹೊರವಲಯದಲ್ಲಿ ಹಲವು ಕೈಗಾರಿಕಾ ಪ್ರದೇಶಗಳಿಗೆ ಸಾವಿರಾರು ಎಕರೆ ರೈತರ ಭೂಮಿಯನ್ನು ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡು ಅನ್ನದಾತರ ವಿರೋಧ ಎದುರಿಸುತ್ತಿದೆ. ಈ ನಡುವೆ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸಕೋಟೆ ಹೊರವಲಯ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯಲ್ಲಿ ಸುಮಾರು 36 ಹಳ್ಳಿಗಳ 18,500 ಎಕರೆ ರೈತರ ಭೂಮಿಯನ್ನು ಸ್ಯಾಟ್ಲೈಟ್ ಟೌನ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.
ಚಿಂತಾಮಣಿ-ಹೊಸಕೋಟೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಅಕ್ರೋಶ ವ್ಯಕ್ತಪಡಿಸಿರುವ ಸಾವಿರಾರು ರೈತರು, "ಪ್ರಾಣ ಬೇಕಾದರೂ ಬಿಡುತ್ತೇವೆ ಭೂಮಿ ಬಿಡುವುದಿಲ್ಲ.." ಎಂದು ಸರ್ಕಾರದ ವಿರುದ್ಧ ಮಂಗಳವಾರ ಬೀದಿಗಿಳಿದು ಬೃಹತ್ ಹೋರಾಟ ನಡೆಸಿದರು.
ಟೌನ್ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಭೂಮಿಯಲ್ಲಿ ಸಾವಿರಾರು ರೈತರು ಹಲವು ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಕೃಷಿ ಆಧರಿತ ಜಾಗವನ್ನು ಭೂಸ್ವಾಧೀನ ಮಾಡಿಕೊಂಡರೆ ಭವಿಷ್ಯ ಹೇಗೆ ಎನ್ನುವ ಚಿಂತೆ 36 ಹಳ್ಳಿಗಳ ರೈತರನ್ನು ಕಾಡುತ್ತಿದೆ. ಹೀಗಾಗಿ ಪ್ರತಿಭಟನಾ ರ‍್ಯಾಲಿ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಪ್ರತಿಭಟನಾ ರ‍್ಯಾಲಿಯಲ್ಲಿ ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡ, ಶಾಶ್ವತ ನೀರಾವರಿ ಹೋರಾಟದ ಅಧ್ಯಕ್ಷ ಆಂಜನೇಯ ರೆಡ್ಡಿ, ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಹಾಗೂ ಶಾಸಕ ಬಿ.ಆರ್.ಪಾಟೀಲ್ ಭಾಗವಹಿಸಿ ಅನ್ನದಾತರಿಗೆ ಸಾಥ್ ನೀಡಿದರು.
ಜೊತೆಗೆ, ಸರ್ಕಾರ ಒಂದೇ ತಾಲೂಕಿನಲ್ಲಿ 18,500 ಎಕರೆ ಭೂಸ್ವಾಧೀನ ಮಾಡಿದರೆ, ರೈತರು ಎಲ್ಲಿಗೆ ಹೋಗಬೇಕು ಎಂದು ಗರಂ ಆದರು. ಕೂಡಲೇ ಟೌನ್ಶಿಪ್ ನಿರ್ಮಾಣ ಕೈಬಿಡುವಂತೆ ಸರ್ಕಾರಕ್ಕೆ ಹೋರಾಟಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಕ್ಫ್ ಬೋರ್ಡ್ ವಿವಾದ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ, ದಾವಣಗೆರೆ - ಶಿವಮೊಗ್ಗದಲ್ಲಿ ಮುಖಂಡರು ವಶಕ್ಕೆ