ವಾಷಿಂಗ್ಟನ್(ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಬಂದಿರುವ ವರದಿಗಳಂತೆ 247 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಹಾಗು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 210 ಮತಗಳನ್ನು ಪಡೆದು ಹಿಂದಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ಮಾಧ್ಯಮ ಸಂಸ್ಥೆ ಅಂದಾಜಿಸಿದೆ.
ಐತಿಹಾಸಿಕವಾಗಿ ಡೆಮಾಕ್ರಟಿಕ್ ಅಥವಾ ರಿಪಬ್ಲಿಕನ್ ಪಕ್ಷಗಳಿಗೆ ಮತ ಹಾಕುತ್ತಿರುವ ರಾಜ್ಯಗಳನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ. ಆದರೆ ಇದು ಅಧ್ಯಕ್ಷೀಯ ಚುನಾವಣೆಯಲ್ಲಿ ಗುರುತರ ಪಾತ್ರ ವಹಿಸುತ್ತಿರುವ 7 ಪ್ರಮುಖ ರಾಜ್ಯಗಳ ಮತಗಳನ್ನು ಒಳಗೊಂಡಿಲ್ಲ. ಈ ಲೆಕ್ಕಾಚಾರವನ್ನಷ್ಟೇ ನೋಡುವುದಾದರೆ ಈ ಹಿಂದಿನ ಚುನಾವಣೆಗಿಂತ ಈ ಬಾರಿ ಯಾವುದೇ ಅಚ್ಚರಿ ಕಾಣುವುದಿಲ್ಲ ಎಂದು ಹೇಳಲಾಗುತ್ತಿದೆ.
ಕಮಲಾ ಹ್ಯಾರಿಸ್ ಅವರು ವರ್ಮೊಂಟ್, ಮಸಾಚುಸೆಟ್ಸ್, ಮೇರಿಲ್ಯಾಂಡ್, ರೋಡ್ ಐಲ್ಯಾಂಡ್, ಕನೆಕ್ಟಿಕಟ್, ಇಲಿನಾಯ್ಸ್ ಮತ್ತು ನ್ಯೂಯಾರ್ಕ್ ರಾಜ್ಯಗಳಲ್ಲಿ ಜಯ ಗಳಿಸುವ ನಿರೀಕ್ಷೆ ಇದೆ.
ಮ್ಯಾಜಿಕ್ ನಂಬರ್ 270: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿ ಒಟ್ಟು 538 ಎಲೆಕ್ಟೋರಲ್ ಮತಗಳ ಪೈಕಿ 270 ಮತಗಳನ್ನು ಪಡೆಯಬೇಕು.
ಉತ್ತರ ಕರೋಲಿನಾ, ಪೆನ್ಸಿಲ್ವೇನಿಯಾ, ವಿಸ್ಕೋನ್ಸಿನ್, ಮಿಚಿಗನ್, ಜಾರ್ಜಿಯಾ, ಅರಿಜೋನಾ ಮತ್ತು ನೆವಡಾ ರಾಜ್ಯಗಳು ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.
ಈ ಮೇಲಿನ ವಿವರವನ್ನು ಈ ರಾಜ್ಯಗಳಲ್ಲಿ ನಡೆದ ಮತದಾನವನ್ನು ಆಧರಿಸಿ ಅಂದಾಜು ಮಾಡಲಾಗಿದೆ. ಇದರಲ್ಲಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುವ ರಾಜ್ಯಗಳ ಪೈಕಿ ಇರುವ ಜಾರ್ಜಿಯಾ ಕೂಡಾ ಸೇರಿದೆ.
ನಿನ್ನೆಯ (ಮಂಗಳವಾರ) ಎಲೆಕ್ಷನ್ ಡೇಗೂ ಮುನ್ನವೇ 82 ಮಿಲಿಯನ್‌ಗೂ ಹೆಚ್ಚು ಅಮೆರಿಕನ್ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇವರು ಮತಗಟ್ಟೆಗಳಿಗೆ ಬಂದು ಅಥವಾ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಹಾಕಿದ್ದಾರೆ.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ