ಬೆಂಗಳೂರು: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂಥ ಹೇಳಿಕೆ ಹಿಂದೆ ಷಡ್ಯಂತ್ರ ಇದೆ. ರಾಷ್ಟ್ರಮಟ್ಟದ ಷಡ್ಯಂತ್ರ ಇದೆ. ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಮುಂದಿನ ಪ್ರಕ್ರಿಯೆಗಳು ಕಾನೂನು ಪ್ರಕಾರ ನಡೆಯಲಿವೆ. ಪೊಲೀಸ್ ಅಧಿಕಾರಿಗಳಿಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಘಟನೆ ಬಗ್ಗೆ ಅತ್ಯಂತ ನೋವು ಮತ್ತು ಆಕ್ರೋಶ ನಮಗಿದೆ. ನಮ್ಮ ಜನ ರಾಜ್ಯ ಕಾನೂನು ಸುವ್ಯವಸ್ಥೆಗೆ ಬೆಲೆ ಕೊಡ್ತಾರೆ. ಆದ್ರೆ ಇಲ್ಲೂ ವಿಷ ಬೀಜ ಬಿತ್ತೋ ಕೆಲಸ ಆಗುತ್ತಿದೆ. ಶಾಂತಿ ಕದಡೋ ಪ್ರಯತ್ನ ನಡೀತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ ವಿರುದ್ಧದ ಪ್ರತಿಭಟನೆಗಳು ಇಂಥವಕ್ಕೆ ವೇದಿಕೆ ಆಗುತ್ತಿವೆ. ರಾಜಕೀಯ ಪಕ್ಷಗಳು ಇಂಥವಕ್ಕೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಬೇಕು. ಇಡೀ ದೇಶದಲ್ಲಿ ಇದೊಂದು ಷಡ್ಯಂತ್ರ ನಡೆಯುತ್ತಿದ್ದು, ಶಾಲಾ ಮಕ್ಕಳನ್ನೂ ಕೂಡ ಈ ಷ್ಯಡ್ಯಂತ್ರದಿಂದ ಬಿಡುತ್ತಿಲ್ಲ. ಸಿಎಎಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ಹಾನಿಯಿಲ್ಲ. ಆದರೂ ಹಾದಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದರು.