ಬೆಂಗಳೂರು : ಕಡಿಮೆ ದರದಲ್ಲಿ ಔಷಧಿ ಕಲ್ಪಿಸುವ ಜನೌಷಧಿ ಕೇಂದ್ರ ಬಡ ಜನರಿಗೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ. ಬಸನಗುಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ 62 ಜನೌಷಧಿ ಕೇಂದ್ರಗಳಿವೆ. ಇದನ್ನು 100ಕ್ಕೆ ಏರಿಸಲು ಕ್ಷೇತ್ರದ ಸಂಸದರು ಯೋಜನೆ ಹಮ್ಮಿಕೊಂಡಿದ್ದು, ಇದಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಧಾನಮಂತ್ರಿ ಜನೌಷಧಿ ಕೇಂದ್ರ 'ಅಜಾದಿ ಕಿ ಅಮೃತ್ ಮಹೋತ್ಸವ್' ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರೊಂದಿಗೆ ಪಾಲ್ಗೊಂಡು ಮಾತನಾಡಿದ ಸಿಎಂ, ಪ್ರಧಾನಿ ನರೇಂದ್ರ ಮೋದಿಯವರು ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುವ ತನಕ ವಿರಮಿಸುವುದಿಲ್ಲ. ಮುಂದೆ ನಿಂತು ದೇಶದ ಮುಂದಾಳತ್ವವನ್ನು ವಹಿಸುವ ಆದರ್ಶ ನಾಯಕರು ಅವರು. ಕಡಿಮೆ ದರದಲ್ಲಿ ದೇಶದೆಲ್ಲೆಡೆ ಔಷಧಿ ಲಭ್ಯವಾಗಿಸುವುದು ಸುಲಭದ ಮಾತಲ್ಲ ಎಂದರು.
ಮೋದಿಯವರು ಯೋಚನೆಗಳನ್ನು,ಯೋಜನೆಗಳನ್ನು ಇನ್ಪೈರ್ ಮಾಡುತ್ತಾರೆ. ಅದನ್ನ ಫೈರ್ ಆಗುವ ರೀತಿ ಮಾಡುತ್ತಾರೆ. ಅವರು ಬಡವರಲ್ಲಿ ಬಡವರನ್ನ ಮರೆಯೋಲ್ಲ. ಅದಕ್ಕೆ ಉದಾಹರಣೆ ಜನೌಷಧಿ. 70 ವರ್ಷದಲ್ಲಿ ಎಲ್ಲಾ ಪ್ರಧಾನಿಗಳಿದ್ದರೂ ಯಾರಾದ್ರೂ ಬಡವರ ಔಷಧಿ ಬಗ್ಗೆ ಯೋಚನೆ ಮಾಡಿದ್ರಾ? ಜನೌಷಧ ಅನುಷ್ಠಾನ ಮಾಡೋದು ಸುಲಭವಲ್ಲ.
ಮೋದಿಯವರು ಜನೌಷಧಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅನಂತ್‌ಕುಮಾರ್ ಇದ್ದಾಗ ಪ್ರಾರಂಭವಾಗಿ ಈಗ ಅನುಷ್ಠಾನವಾಗುತ್ತಿದೆ. ನಾನು ಈಗ ಈ ಜನೌಷಧಿ ಕೇಂದ್ರ ನೋಡಲು ಬಂದಿದ್ದೇನೆ. ಬಸವನಗುಡಿ ಜನ ಇಡೀ ಕರ್ನಾಟಕದಕ್ಕೆ ಮಾದರಿ. ಇಂತಹ ಜನರನ್ನು ಭೇಟಿ ಮಾಡಿದ್ದು ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಶಾಸಕ ರವಿಸುಬ್ರಹ್ಮಣ್ಯ, ಸಂಸದ ತೇಜಸ್ವಿಸೂರ್ಯ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್ ಉಪಸ್ಥಿತರಿದ್ದರು.