ಬೆಂಗಳೂರು: ಮೂರು ದಿನಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಇಂದು ಅಧಿಕೃತವಾಗಿ ತೆರೆ ಬಿದ್ದಿದ್ದು, ಕಾರ್ತಿಕ ಮಾಸದ ಕಡೆಯ ಸೋಮವಾರ ಪ್ರತಿ ವರ್ಷ ನಡೆಯುವ ಕಡ್ಲೆಕಾಯಿ ಪರಿಷೆಗೆ ಈ ಬಾರಿಯೂ ಜನಸಾಗರವೇ ಹರಿದುಬಂದಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಬಸವನಗುಡಿ ಕಡ್ಲೆಕಾಯಿ ಪರಿಷೆ ಅದ್ಧೂರಿಯಾಗಿ ನಡೆದಿದ್ದು, ಬಸವನ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಕಡ್ಲೆಕಾಯಿ ರಾಶಿ ಒಂದು ಕಡೆಯಾದರೆ, ಜಾತ್ರೆಯ ಸಂಭ್ರಮ ಮತ್ತೊಂದು ಕಡೆ. ಎರಡು ದಿನಗಳಿಂದ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ದೊಡ್ಡ ಬಸವನ ದರ್ಶನ ಪಡೆದು ಕಡ್ಲೆಕಾಯಿ ತಿಂದು ಮನೆಯತ್ತ ಹೆಜ್ಜೆ ಹಾಕಿದರು.
ಒಂದು ಸೇರು ಕಡ್ಲೆಕಾಯಿಯನ್ನು 20ರಿಂದ 40 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು ಬೇಯಿಸಿದ ಕಡ್ಲೆಕಾಯಿಗೆ ಐವತ್ತು ರೂಪಾಯಿ ನಿಗದಿಪಡಿಸಲಾಗಿತ್ತು. ಕಡ್ಲೆಕಾಯಿಯನ್ನು ಮಾತ್ರ ಒಂದು ವಾರದ ತನಕ ಮಾರಾಟ ಮಾಡಲಾಗುತ್ತದೆ ಎಂದು ವರ್ತಕರು ತಿಳಿಸಿದ್ದಾರೆ.