ಬೆಂಗಳೂರು : ರಾಜ್ಯ ಸರ್ಕಾರ ನೀಡಿರುವ ಮಾತಿನಂತೆ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿಯೇ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕು ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಭರವಸೆ ನೀಡಿ ಮಾರ್ಚ್ 15ಕ್ಕೆ ಒಂದು ವರ್ಷವಾಗುತ್ತಿದೆ. ಆದರೂ ಸರ್ಕಾರ ಭರವಸೆ ಈಡೇರಿಸಿಲ್ಲ. ಆದ್ದರಿಂದ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿಯೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಬೇಡಿಕೆ ಈಡೇರಿಸುವ ಸಂಬಂಧ ರಾಜ್ಯ ಸರ್ಕಾರ ತಮ್ಮ ಗಡುವು ಅವಧಿಯನ್ನು ಮುಂದುವರಿಸುತ್ತಲೇ ಇದೆ. ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 2021ರ ಸೆಪ್ಟೆಂಬರ್ 15ರೊಳಗೆ ಬೇಡಿಕೆ ಈಡೇರಿಸುವ ಬಗ್ಗೆ ಸದನದಲ್ಲಿಯೇ ಭರವಸೆ ನೀಡಿದ್ದರು.
ನಂತರ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಅಧಿವೇಶನದೊಳಗೆ ಮೀಸಲಾತಿ ಘೋಷಿಸುವುದಾಗಿ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದ ವೇಳೆ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತು ಕೊಟ್ಟಿದ್ದಾರೆ. ಅದರಂತೆ ಇದೇ ಬಜೆಟ್ ಅಧಿವೇಶನದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮಾ.15ರಂದು ದುಂಡುಮೇಜಿನ ಸಭೆ : ಸರ್ಕಾರ ನಮ್ಮ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಚರ್ಚಿಸಲು ಮಾ. 15ರಂದು ದುಂಡುಮೇಜಿನ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಪಂಚಸೇನಾ ರಾಜ್ಯಾಾಧ್ಯಕ್ಷ ಬಿ.ಎಸ್. ಪಾಟೀಲ, ಸ್ವಾಗತ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಸಮಾಜದ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಲಿಂಗಾಯತರಿಗೆ ಬಸವಣ್ಣನವರು ಐಕ್ಯವಾದ ಕೂಡಲಸಂಗಮದಲ್ಲಿರುವ ಪೀಠ ಒಂದೇ. ಅದಕ್ಕೆ ಯಾವುದೇ ಪರ್ಯಾಯ ಪೀಠಗಳಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ 3ನೇ ಪೀಠವನ್ನು ಆರಂಭಿಸಿದ್ದಾರೆ. ಆದರೆ, ಲಿಂಗಾಯತರಿಗೆ ಒಂದೇ ಪೀಠ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಶಪ್ಪನವರ್, ಪ್ರತಿ ಬಾರಿಯೂ ಕೊಟ್ಟ ಮಾತಿಗೆ ತಪ್ಪಲ್ಲ ಎಂದು ಹೇಳುವ ಯಡಿಯೂರಪ್ಪನವರು ಮೀಸಲಾತಿ ವಿಚಾರದಲ್ಲಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ನಂತರ ಅದರ ಪರಿಣಾಮವನ್ನ ಕೂಡ ಎದುರಿಸುತ್ತಿದ್ದಾರೆ ಎಂದರು. 2ಎ ಮೀಸಲಾತಿ ಮತ್ತು ಒಬಿಸಿಯಲ್ಲಿರುವ ಲಿಂಗಾಯತರಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಯಡಿಯೂರಪ್ಪ ಭರವಸೆ ನೀಡಿದ್ದರು. ಕೊನೆಗೂ ಅದು ಭರವಸೆಯಾಗಿಯೇ ಉಳಿದಿದೆ ಎಂದರು.
ಲಿಂಗಾಯತರ ಶಾಪ ತಟ್ಟಿದೆ: ಮೀಸಲಾತಿ ವಿಚಾರದಲ್ಲಿ ಲಿಂಗಾಯತರಿಗೆ ಕೊಟ್ಟ ಮಾತನ್ನು ತಪ್ಪಿದ ಶಾಪ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಟ್ಟಿದೆ ಎಂದು ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಕುಟುಕಿದರು. ಸುದ್ದಿಗೋಷ್ಠಿಯಲ್ಲಿ ಗೌಡ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: 'ಪಂಚಮಸಾಲಿ ಮೀಸಲಾತಿ ಹೋರಾಟದ ವರ್ಷಾಚರಣೆ ಕಾರ್ಯಕ್ರಮ ಮುಂದೂಡಿಕೆ'