ಬೆಂಗಳೂರು: ಸಿಎಂ ಸದನದಲ್ಲಿ ಮೀಸಲಾತಿ ಸಂಬಂಧ ನೀಡಿರುವ ಭರವಸೆ ಬಗ್ಗೆ ನಮಗೆ ವಿಶ್ವಾಸ ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೀಸಲಾತಿ ಸಂಬಂಧ ಸಿಎಂ ಸದನದಲ್ಲಿ ಉತ್ತರ ಕೊಡಬೇಕೆಂಬ ಬೇಡಿಕೆ ಇತ್ತು. ಇಂದು ಸಿಎಂ ಆರು ತಿಂಗಳೊಳಗೆ ಮೀಸಲಾತಿ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅದನ್ನು ನಾವು ಒಪ್ಪುತ್ತೇವೆ. ಸ್ವಾಮೀಜಿಗಳ ಹೋರಾಟ ಆರು ತಿಂಗಳ ಮಟ್ಟಿಗೆ ಸ್ಥಗಿತಗೊಳಿಸಲು ಮನವಿ ಮಾಡುತ್ತೇನೆ. ಆರು ತಿಂಗಳ ನಂತರ ನಾವು ಏನು ಮಾಡಬೇಕೆಂಬ ತೀರ್ಮಾನ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಸಿಡಿ ಪ್ರಕರಣ: ತನಿಖೆ ನಂತರ ಪ್ರೊಡ್ಯೂಸರ್, ಡೈರೆಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗುತ್ತೆ!
ಮುಖ್ಯಮಂತ್ರಿಗಳಿಗೆ ನಾನು ಈ ಬಗ್ಗೆ ಮನವಿ ಮಾಡಿದ್ದೆ. ಆದರೆ ಈಗ ಸಿಎಂ ಸದನದಲ್ಲಿ ಭರವಸೆ ನೀಡಿದ್ದಾರೆ. ಸ್ವಯಂಪ್ರೇರಿತವಾಗಿ ಸದನದಲ್ಲಿ ಸಿಎಂ ಭರವಸೆ ನೀಡಿದ್ದಾರೆ. ಸದನದಲ್ಲಿ ನೀಡುವ ಭರವಸೆ ಮೇಲೆ ವಿಶ್ವಾಸ ಇಡಲೇಬೇಕು. ಸದನದಲ್ಲಿ ಸುಮ್ಮನೇ ಭರವಸೆ ಕೊಡುವುದಕ್ಕೆ ಆಗುವುದಿಲ್ಲ. ಇಷ್ಟು ದಿನ ಸಿಎಂ ಸದನದಲ್ಲಿ ಭರವಸೆ ನೀಡಲು ಸಿದ್ಧವಿರಲಿಲ್ಲ. ಆದರೆ, ಇಂದು ಮೀಸಲಾತಿ ಸಂಬಂಧ ಭರವಸೆ ನೀಡಿದ್ದಾರೆ. ಅವರ ಭರವಸೆ ಮೇಲೆ ವಿಶ್ವಾಸ ಇದೆ ಎಂದು ಸ್ಪಷ್ಟಪಡಿಸಿದರು.
ನ್ಯಾ.ಸುಭಾಷ್ ಅಡಿ ನೇತೃತ್ವದ ಸಮಿತಿ ಕೇವಲ ಮುಂದೂಡುವ ತಂತ್ರವಾಗಿದೆ. ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಆ ಸಮಿತಿಗೆ ನಾವು ಒಪ್ಪುವುದಿಲ್ಲ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡುವ ಶಿಫಾರಸು ಆಧಾರದಲ್ಲಿ ಸರ್ಕಾರ ಮೀಸಲಾತಿ ಸಂಬಂಧ ತೀರ್ಮಾನ ಕೈಗೊಳ್ಳಬೇಕು. ಸಮಗ್ರ ಹಿಂದುಳಿದ ವರ್ಗಕ್ಕೂ ಮೀಸಲಾತಿ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ವರದಿ ಮತ್ತು ಆಯೋಗದ ವರದಿ ತರಿಸಿಕೊಂಡು ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದರು. ಆದರೆ, ನಾವು ಮಾತ್ರ ಆಯೋಗದ ಶಿಫಾರಸು ಮೇಲೆ ಅವಲಂಬಿತವಾಗಿದ್ದೇವೆ ಎಂದರು.