ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಪ್ರವಾಸಿಗರಿಗೆ ಮುಕ್ತವಾಗಿದೆ. ರಾಜ್ಯ ಸರ್ಕಾರದ ಅನುಮೋದನೆಯಂತೆ ಇಂದು ಪಾರ್ಕ್ನ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರವೇಶ ದ್ವಾರಗಳ ಬಳಿ ಸ್ಯಾನಿಟೈಸರ್ ಹಾಗೂ ಬಂದಂತಹ ವಾಹನಗಳಿಗೆ ಔಷಧಿ ಸಿಂಪಡಣೆ ಮಾಡುವುದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಪ್ರವಾಸಿಗರನ್ನ ಬರಮಾಡಿಕೊಂಡಿದ್ದಾರೆ.
ಪಾರ್ಕ್ಗೆ ಬರುವ ಪ್ರವಾಸಿಗರು ಸಫಾರಿ, ಮೃಗಾಲಯ, ಝೂ, ಚಿಟ್ಟೆ ಪಾರ್ಕ್, ಬ್ಯಾಟರಿ ಚಾಲಿತ ವಾಹನ ಸೇರಿ ವಾಹನ ಪಾರ್ಕಿಂಗ್ನ ಟಿಕೆಟ್ಗಾಗಿ ಸಂಪೂರ್ಣ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ತಿಳಿಯದೆ ಬಂದ ಪ್ರವಾಸಿಗರಿಗೆ ಆನ್ಲೈನ್ ಮೂಲಕ ಸಹಾಯ ಮಾಡಲು ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.
ಅಲ್ಲದೇ ಪ್ರವೇಶ ದ್ವಾರದ ಬಳಿ ಗ್ರೀನ್ಮ್ಯಾಟ್ ಹಾಕಿ ಅದರಲ್ಲಿ ಔಷಧಿ ಸಿಂಪಡಣೆ ಮಾಡಿದ್ದು, ಉದ್ಯಾನವನಕ್ಕೆ ಪ್ರವೇಶಿಸುವ ಪ್ರವಾಸಿಗರು ಅಲ್ಲಿ ಹೆಜ್ಜೆಯನ್ನಿಟ್ಟು ಹೋಗುವಂತೆ ಮಾಡಿದ್ದಾರೆ. ಇದರಿಂದ ಒಳಭಾಗದಲ್ಲಿ ಓಡಾಡುವ ಪ್ರವಾಸಿಗರಿಂದ ಪ್ರಾಣಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಹಲವಾರು ದಿನಗಳಿಂದ ಮನೆಯಲ್ಲೇ ಇದ್ದು ಬೋರ್ ಆಗಿದ್ದವರು ಕುಟುಂಬ ಸಮೇತರಾಗಿ ಬನ್ನೇರುಘಟ್ಟಕ್ಕೆ ಆಗಮಿಸಿ ಸಂತಸದ ಕ್ಷಣಗಳನ್ನ ಕಳೆದರು. ಉದ್ಯಾನವನದಲ್ಲಿ ಪ್ರಾಣಿಗಳನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ ಎಂದು ಪ್ರವಾಸಿಗರು ಖುಷಿ ವ್ಯಕ್ತಪಡಿಸಿದರು.