ಬೆಂಗಳೂರು : ಒಟಿಪಿ ಹಾಗೂ ಯಾವುದೇ ಸಂದೇಶ ರವಾನಿಸದೇ ಗ್ರಾಹಕರೊಬ್ಬರ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಲಾಗಿದ್ದು, ಸೇವಾ ನ್ಯೂನತೆ ಎಸಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗ್ರಾಹಕರ ಸಂಪೂರ್ಣ ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ಸೇರಿಸಿ ಹಿಂದಿರುಗಿಸುವಂತೆ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಸೂಚನೆ ನೀಡಿದೆ. ಜೊತೆಗೆ, ಗ್ರಾಹಕರು ನಡೆಸಿದ ಕಾನೂನು ಹೋರಾಟದ ಫಲವಾಗಿ 3 ಸಾವಿರ ರೂ. ಪರಿಹಾರ ನೀಡಲು ತಿಳಿಸಿದೆ.
ರಾಜರಾಜೇಶ್ವರಿ ನಗರದ ಐಡಿಯಲ್ಸ್ ಹೋಮ್ ಟೌನ್ಶಿಪ್ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಚನ್ನಸಂದ್ರದ ಕೆ. ಮುರಳಿ ಎಂಬುವರು ಖಾತೆ ಹೊಂದಿದ್ದು, ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರದ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಕೆ.ಎಸ್.ಬೀಳಗಿ, ಸದಸ್ಯರಾದ ಬಿ.ದೇವರಾಜು ಮತ್ತು ವಿ.ಅನುರಾಧ ಅವರಿದ್ದ ತ್ರಿಸದಸ್ಯ ಪೀಠ ಈ ಸೂಚನೆ ನೀಡಿದೆ.
ಜೊತೆಗೆ, ದೂರುದಾರ ಮುರಳಿ ಅವರ ಖಾತೆಯಿಂದ ಅಕ್ರಮವಾಗಿ ವರ್ಗಾವಣೆಯಾಗಿರುವ ಸಂಪೂರ್ಣ ಮೊತ್ತ 75,853 ಕ್ಕೆ ಶೇ.8 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು. ಅಲ್ಲದೇ, ಕಾನೂನು ಹೋರಾಟ ನಡೆಸಿದ ಪರಿಹಾರವಾಗಿ 3 ಸಾವಿರ ರೂಗಳನ್ನು ನೀಡುವಂತೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ ಏನು? : ದೂರುದಾರ ಮುರಳಿ ಅವರ ಡೆಬಿಟ್ಕಾರ್ಡ್ನಿಂದ 2021ರ ಫೆಬ್ರುವರಿ 15 ರಂದು ಕೆಲವು ಬಾರಿ ಅನಧಿಕೃತ ವಹಿವಾಟುಗಳು ನಡೆದಿದ್ದವು. 25,296 ರೂ. ಗಳಂತೆ ಎರಡು ಬಾರಿ ಹಾಗೂ 10,118 ರೂ.ಗಳಂತೆ 2 ಬಾರಿ ಒಟ್ಟು 75,853 ರೂ. ಗಮನಕ್ಕೆ ಬಾರದೇ ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿತ್ತು.
ಆದರೆ, ಹಣ ವರ್ಗಾವಣೆಯಾದ ಸಂದರ್ಭದಲ್ಲಿ ಬ್ಯಾಂಕ್ ನಿಂದ ದೂರುದಾರರಿಗೆ ಒಟಿಪಿ, ಮೊಬೈಲ್ ಸಂದೇಶ ಹಾಗೂ ಇ-ಮೇಲ್ ಬಂದಿರಲಿಲ್ಲ. ಇದರಿಂದ ಆಘಾತಕ್ಕೊಳಗಾಗಿದ್ದ ಮುರಳಿ, 2021ರ ಫೆ.18 ರಂದು ಬ್ಯಾಂಕ್ ಮತ್ತು ಪೊಲೀಸರಿಗೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
2021 ಜುಲೈ 30 ರಂದು ಆರ್ಬಿಐಗೆ ಪ್ರತಿವಾದಿಯಾಗಿರುವ ಎಸ್ಬಿಐ ಬ್ಯಾಂಕ್ ವಿರುದ್ಧ ದೂರು ನೀಡಿದ್ದರು. ಅಷ್ಟೇ ಅಲ್ಲದೆ, ಹಲವು ಬಾರಿ ಬ್ಯಾಂಕ್ಗೆ ಭೇಟಿ ನೀಡಿ ವಿಚಾರಿಸಿದ್ದರು. ಜೊತೆಗೆ ಇಮೇಲ್ ಮೂಲಕ ಮನವಿ ಕೂಡ ಮಾಡಲಾಗಿತ್ತು. ಆದರೆ, ಬ್ಯಾಂಕ್ ಅಧಿಕಾರಿಗಳು ಸೂಕ್ತವಾದ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ, ಬ್ಯಾಂಕ್ನವರು ಸೇವಾ ನ್ಯೂನತೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಹಕರ ವ್ಯಾಜ್ಯಗಳ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ಆರೋಪ ನಿರಾಕರಿಸಿದ್ದ ಬ್ಯಾಂಕ್: ಪ್ರಕರಣ ಸಂಬಂಧ ಪ್ರತಿವಾದಿ ಬ್ಯಾಂಕ್ಗೆ ನೋಟಿಸ್ ಜಾರಿ ಮಾಡಿದ ಬಳಿಕ, ತಮ್ಮ ವಕೀಲರ ಮೂಲಕ ಹಾಜರಾಗಿ ದೂರುದಾರರು ಮಾಡಿರುವ ಆರೋಪಗಳನ್ನು ಎಸ್ಬಿಐ ನಿರಾಕರಿಸಿತ್ತು. ಅಲ್ಲದೇ, ದೂರುದಾರರು ತಮ್ಮ ಖಾತೆಯ ವಿವರ ಮತ್ತು ಓಟಿಪಿಯನ್ನು ನೀಡದ ಹೊರತು ಹಣ ಇತರರಿಗೆ ವರ್ಗಾವಣೆಯಾಗುವುದಕ್ಕೆ ಸಾಧ್ಯವೇ ಇಲ್ಲ.
ದೂರುದಾರರ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣವಾಗಿದೆ. ವಂಚಕರ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ, ಪ್ರತಿ ವಾದಿ ಬ್ಯಾಂಕ್ನಿಂದ ಯಾವುದೇ ರೀತಿಯ ಸೇವಾ ನ್ಯೂನತೆ ಉಂಟಾಗಿಲ್ಲ. ಆದ್ದರಿಂದ ದೂರದಾರರಿಗೆ ಹಣ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿ, ದೂರುನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿತ್ತು. ಆದರೆ, ತಮ್ಮ ವಾದಕ್ಕೆ ಪುಷ್ಠಿ ನೀಡುವುದಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಿರಲಿಲ್ಲ.
ಇದನ್ನೂ ಓದಿ: ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯಿಂದ ವೈದ್ಯೆ ಸಬಿತಾಗೆ ಜೈಲು ಶಿಕ್ಷೆ