ಬೆಂಗಳೂರು: ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿರುವ ಶಂಕೆ ಮೇರೆಗೆ ಕೆಲ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ 78 ದಿನಗಳ ಬಳಿಕ ಕೊನೆಗೂ ಪತ್ತೆಯಾಗಿದ್ದಾಳೆ. ಗುಜರಾತ್ನ ಸೂರತ್ ಆಶ್ರಮವೊಂದರಲ್ಲಿ ತಂಗಿದ್ದ ಬಾಲಕಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ತಿಂಗಳ ಹಿಂದೆ ಆತ್ಮಗಳ ಜೊತೆ ಮಾತನಾಡುತ್ತೇನೆ ಎಂಬ ಭ್ರಮೆಯೊಂದಿಗೆ ನಾಪತ್ತೆಯಾಗಿದ್ದಾಳೆ ಎಂಬ ವಿಚಾರ ಹೊರಬಂದಿತ್ತು. ಕಾಣೆಯಾದ ಬಾಲಕಿ ಪತ್ತೆಯಾದ ಮೇಲೆ ಆತ್ಮಗಳ ವಿಚಾರಕ್ಕೆ ರೋಚಕ ಟ್ವಿಸ್ಟ್ ಸಹ ಸಿಕ್ಕಿದೆ.
ಬಾಲಕಿ ನಾಪತ್ತೆಯಾದ ಬಳಿಕ ತಮ್ಮ ಮಗಳು ಆತ್ಮಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪೋಷಕರು ದೂರು ನೀಡಿದ್ದರು. ಸುಬ್ರಹ್ಮಣ್ಯನಗರ ಪೊಲೀಸರು ಟೀಂಗಳನ್ನು ರಚನೆ ಮಾಡಿ ಬಾಲಕಿಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಈ ವೇಳೆ, ಸಿಕ್ಕ ಸಿಸಿಟಿವಿ ದೃಶ್ಯ ಆಧರಿಸಿ ಕಿಡ್ನ್ಯಾಪ್ ಸಾಧ್ಯತೆಯನ್ನು ತಳ್ಳಿಹಾಕಿದ್ದರು.
ಸಾಮಾಜಿಕ ಜಾಲತಾಣ ಹಾಗೂ ಪೊಲೀಸರ ತನಿಖೆಯಿಂದ ಅಕ್ಟೋಬರ್ 31ಕ್ಕೆ ಕಣ್ಮರೆಯಾದ ಬಾಲಕಿ ಜನವರಿ 15ಕ್ಕೆ ಗುಜರಾತಿನ ಸೂರತ್ನಲ್ಲಿನ ಆಶ್ರಮವೊಂದರಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಕರೆತಂದು ಮಕ್ಕಳ ಕೇರ್ ಸೆಂಟರ್ಗೆ ನೀಡಿಲಾಗಿತ್ತು. ಸದ್ಯ ಪೊಲೀಸರು ಪೋಷಕರ ಮಡಿಲಿಗೆ ಬಾಲಕಿಯನ್ನು ಒಪ್ಪಿಸಿದ್ದಾರೆ.
ಆತ್ಮಗಳ ವಿಚಾರಕ್ಕೂ ಬಾಲಕಿ ಕಣ್ಮರೆಗೂ ಸಂಬಂಧವೇ ಇಲ್ಲ:
15ರ ಬಾಲೆಯ ನಾಪತ್ತೆಗೆ ಆಕೆಯ ಮೇಲೆ ಬಲವಾದ ಒತ್ತಡ, ಪ್ರಚೋದನೆ ಇರಬಹುದು ಎನ್ನಲಾಗಿತ್ತು. ಆಕೆ ಆತ್ಮಗಳ ವಿಚಾರದ ಬಗ್ಗೆ ತಿಳಿದಿದ್ದೇ ಇದಕ್ಕೆ ಕಾರಣವೆಂಬ ಸಂಶಯ ಉಂಟಾಗಿತ್ತು. ಆದರೆ, ಯುವತಿಗೂ ಮತ್ತು ಪೋಷಕರ ನಡುವೆ ಶಾಲೆಗೆ ಸಂಬಂಧಿಸಿದಂತೆ ಅಸಮಾಧಾನ ಉಂಟಾಗಿತ್ತು.
ತನ್ನನ್ನು ಬೇರೆ ಶಾಲೆಗೆ ಸೇರಿಸುವಂತೆ ಹೇಳಿದರೂ ತಂದೆ ಸೇರಿಸಿರಲಿಲ್ಲ. ಇದೇ ಬೇಸರದಿಂದಲೇ ಮನೆಯಿಂದ 2,500 ಸಾವಿರ ರೂ. ಎರಡು ಜೊತೆ ಬಟ್ಟೆ ತೆಗೆದುಕೊಂಡು ಕಣ್ಮರೆಯಾಗಿದ್ದಳು. ತಾನು ಮನೆ ಬಿಡಲು ಶಾಲೆಯ ವಿಚಾರದಲ್ಲಿ ನನ್ನ ತಂದೆ ತಾಯಿ ಜೊತೆ ನಡೆದ ವಾಗ್ವಾದ ಕಾರಣ ಎಂದಿದ್ದಾಳೆ. ಆ ಮೂಲಕ ಆತ್ಮಗಳ ಜೊತೆ ಮಾತುಕತೆ ಏನು ಇಲ್ಲ. ಕೇವಲ ವೈಮನಸ್ಸಿನ ಕಾರಣವೇ ಮನೆಬಿಡಲು ಕಾರಣ ಎಂದಿದ್ದಾಳೆ.
ಇದನ್ನೂ ಓದಿ: ಮಾಟ-ಮಂತ್ರದ ಪ್ರಭಾವಕ್ಕೊಳಗಾಗಿ 2 ತಿಂಗಳ ಹಿಂದೆ ಮನೆ ತೊರೆದ ಬಾಲಕಿ... ಹುಡುಕಿಕೊಡುವಂತೆ ಪೋಷಕರ ಮನವಿ!