ಬೆಂಗಳೂರು : ರಾಜಧಾನಿಗೆ ಪರ್ಯಾಯ ಸಾರಿಗೆ ಎಂದು ಕರೆಸಿಕೊಳ್ಳುವ ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಬಿಎಂಆರ್ಸಿಎಲ್ ಮುಂದಾಗಿದೆ. ಈ ಕುರಿತು ಡಿಪಿಆರ್ ಸಿದ್ಧವಾಗಿದ್ದು, 2028ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತದ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ. 45 ಕಿ.ಮೀ ವಿಸ್ತೀರ್ಣದ ಎರಡು ಕಾರಿಡಾರ್ ನಿರ್ಮಿಸಲಾಗುತ್ತಿದೆ. ಬಿಎಂಆರ್ಸಿಎಲ್ ತನ್ನ 2ನೇ ಹಂತದ ಮೆಟ್ರೋ ಯೋಜನೆಯನ್ನು 2024ರೊಳಗೆ ಪೂರ್ಣಗೊಳಿಸುವ ಇರಾದೆ ಹೊಂದಿದೆ. ಆದರೆ, 2 ಹಂತದ ಯೋಜನೆ ಪ್ರಾರಂಭಕ್ಕೂ ಮುನ್ನ 3ನೇ ಹಂತದ ಯೋಜನೆ ನೀಲನಕ್ಷೆ ಸಿದ್ಧಗೊಂಡಿತ್ತು ಎಂದು ಮಾಹಿತಿ ನೀಡಿದ್ದಾರೆ.
ಗುರುವಾರ ಕರಡು ನಕ್ಷೆಯನ್ನು ಪ್ರಕಟಿಸಲಾಗಿದೆ. ಹೊರವಲಯದಲ್ಲಿ ಮೆಟ್ರೋ ಆಗಮನದ ನಿರೀಕ್ಷೆ ಜನರಿಗೆ ಸಂತಸ ಉಂಟುಮಾಡಿದೆ. ಬಹುತೇಕ 2024ರಿಂದ 2025ರ ನಡುವೆ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಪೂರ್ಣವಾಗಲಿದೆ. ಇದೇ ಸಂದರ್ಭದಲ್ಲಿ 3ನೇ ಹಂತದ ಕಾಮಗಾರಿ ಶುರುವಾಲಿದೆ ಎಂದು ಹೇಳಿದ್ದಾರೆ.
11,250 ಕೋಟಿ ರೂ. ವೆಚ್ಚದ ನೀಲನಕ್ಷೆ : ಜೆ.ಪಿ.ನಗರದಿಂದ ಹೆಬ್ಬಾಳದವರೆಗೆ 32 ಕಿ.ಮೀ ಹಾಗೂ ಹೊಸಹಳ್ಳಿ ಟೋಲ್ನಿಂದ ಕಡಬಗೆರೆವರೆಗಿನ 13 ಕಿ.ಮೀ ದೂರದ ಎರಡು ಕಾರಿಡಾರ್ 3ನೇ ಹಂತದ ಮೆಟ್ರೋ ಯೋಜನೆಯಲ್ಲಿ ಬರಲಿದೆ. ಈ ಯೋಜನೆ ಉಪನಗರ ರೈಲು, ಬಸ್ ಡಿಪೋಗಳಿಗೆ ಸೇರಿ ಪ್ರಮುಖ 9 ಸಾರಿಗೆ ತಾಣಗಳಿಗೆ ಸಂಪರ್ಕ ಕಲ್ಪಿಸಲಿದೆ.
11,250 ಕೋಟಿ ರೂ. ವೆಚ್ಚದಲ್ಲಿ ನೀಲನಕ್ಷೆ ಸಿದ್ದವಾಗಿದೆ. ಕೆ.ಆರ್.ಪುರಂ, ಹೆಬ್ಬಾಳ, ಕಾಮಾಕ್ಯ ಮೆಟ್ರೋ ನಿಲ್ದಾಣ, ಏರ್ಪೊರ್ಟ್ ಮೂಲಕ 2ನೇ ಹಂತದ ಯೋಜನೆಗೆ ಸಂಪರ್ಕ ಕಲ್ಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಹೆಚ್ಚಳ: ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ